ಮೈಸೂರು, ಅಕ್ಟೋಬರ್ 25, 2021 (www.justkannada.in): ಮೈಸೂರಿನಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಸಿಂಧಗಿ, ಹಾನಗಲ್ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯಿಂದ ಹಣಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಸಾದ್ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಡೆದ ನಂಜನಗೂಡು ಉಪ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡರು. ಕಾಂಗ್ರೆಸ್ ಗೆ ಅಭ್ಯರ್ಥಿಯೇ ಇಲ್ಲದಿದ್ದರೂ ಬೇರೆ ಪಕ್ಷದವರನ್ನು ಸೆಳೆದು ನಿಲ್ಲಿಸಿದ್ರಿ. ಜೆಡಿಎಸ್ ನವರು ಅಭ್ಯರ್ಥಿ ಹಾಕದೇ ಕಾಂಗ್ರೆಸ್ ಗೆ ಅನುಕೂಲ ಮಾಡಿಕೊಟ್ಟರು. ನನ್ನಲ್ಲಿ ಹಣ ಇಲ್ಲ ಚುನಾವಣೆಗೆ ನಿಲ್ಲೋದಿಲ್ಲ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೆ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಪೊಲೀಸರ ಮೂಲಕ ಹಣ ಹಂಚಿಕೆ ಮಾಡಿದ್ರು. ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಸಮ್ಮುಖದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿದ್ರು. ಆ ಉಪ ಚುನಾವಣೆ ನನಗೆ ಅತಿ ಹೆಚ್ಚು ನೋವು ನೀಡಿದೆ. ಆ ನೋವನ್ನು ಜೀವನ ಪರ್ಯಂತ ಮರೆಯಲಾಗುವುದಿಲ್ಲ ಪ್ರಸಾದ್ ಹೇಳಿದರು.
ಆಡಳಿತ ಯಂತ್ರ ದುರ್ಬಳಕೆ
ಸರ್ಕಾರದ ಆಡಳಿತ ಯಂತ್ರವನ್ನು ಸಿದ್ದರಾಮಯ್ಯ ಅತೀ ಹೆಚ್ಚು ದುರ್ಬಳಕೆ ಮಾಡಿಕೊಂಡ್ರು. ವಿವಿಧ ನಿಗಮಗಳಿಂದ ಕ್ಷೇತ್ರದ ಮತದಾರರಿಗೆ ಕೋಟಿಗಟ್ಟಲೆ ಸಾಲದ ಆಮಿಷ ಒಡ್ಡಿದ್ರು. ನೂರಾರು ಕೋಟಿ ರೂ.ತುಂಡು ಗುತ್ತಿಗೆ ನೀಡಿ ಕಾಮಗಾರಿ ಮಾಡಿದ್ರು. ಸೋತು ಸುಣ್ಣವಾಗಿರೋ ಕಾಂಗ್ರೆಸ್ಸಿಗರು ಆಡಳಿತದಲ್ಲಿದ್ದಾಗ ಏನೆಲ್ಲಾ ಮಾತನಾಡಿದ್ರು. ಈಗ ಬಿಜೆಪಿ ವಿರುದ್ದ ಮಾತನಾಡ್ತಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ತುಂಬಾ ಹತಾಶರಾಗಿದ್ದಾರೆ. ಹತಾಶರಾಗಿ ಉದ್ವೇಗದಿಂದ ಏನೇನೊ ಮಾತನಾಡುತ್ತಿದ್ದಾರೆ. ಇತ್ತೀಚಿನವರೆಗೂ ನಾನೇ ಮುಂದಿನ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ. ಆದರೆ ಕಳೆದೊಂದು ವಾರದಿಂದ ವರಸೆ ಬದಲಿಸಿಕೊಂಡಿದ್ದಾರೆ. ಮುಂದಿನ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತಿದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದರು.