ಮೈಸೂರು,ಮೇ,4,2024 (www.justkannada.in): ಮೈಸೂರು ಜಿಲ್ಲೆಯಲ್ಲಿ ನಿನ್ನೆ ಗುಡುಗು, ಮಿಂಚು, ಬಿರುಗಾಳಿ ಆರ್ಭಟದ ಜೊತೆ ಭಾರಿ ಮಳೆ ಸುರಿದಿದ್ದು, ಮಳೆಯ ಅವಾಂತರದಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ನಿನ್ನೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಆಲನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಕುಮಾರ್ (34) ಮೃತಪಟ್ಟವರು ಶಿವಕುಮಾರ್ ಮಾರಶೆಟ್ಟಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಿನ್ನೆ ಏಕಾಏಕಿ ಜೋರಾಗಿ ಬಿರುಗಾಳಿ ಬೀಸಿದ ಹಿನ್ನೆಲೆ, ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ.
ನಿನ್ನೆ ಭಾರಿ ಮಳೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ ಮೈಸೂರು ಜಿಲ್ಲೆ ಹೆಚ್ಡಿ.ಕೋಟೆಯಲ್ಲಿ ನಡೆದಿದೆ. ತೆಂಗಿನ ಮರ ಹೊತ್ತಿ ಉರಿಯುವುದನ್ನ ಸ್ಥಳೀಯರು ಚಿತ್ರೀಕರಿಸಿದ್ದು, ಸಿಡಿಲಿಗೆ ಸಿಲುಕಿ ಮರ ಉರಿಯುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇನ್ನು ಮೈಸೂರು ನಗರದಲ್ಲೂ ಮಳೆ ಹಾಗೂ ಭಾರಿ ಗಾಳಿಯ ಅವಾಂತರಕ್ಕೆ ಸಿಲುಕಿ ನೂರಾರು ಮರಗಳು ನೆಲಕ್ಕುರುಳಿವೆ. ಈ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರ ಪರದಾಟ ನಡೆಸಿದ ಪರಿಸ್ಥಿತಿ ಉಂಟಾಗಿತ್ತು.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿ ಬೃಹತ್ ಮರ ಧರೆಗುರುಳಿ ಎರಡು ಆಟೋ ಸಂಪೂರ್ಣ ಜಖಂ ಆಗಿವೆ. ಸಿಲ್ಕ್ ಫ್ಯಾಕ್ಟರಿ ಬಳಿಯ ಮಾನಂದವಾಡಿ ರಸ್ತೆಯಲ್ಲಿ ರಸ್ತೆಯುದ್ದಕ್ಕೂ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ರಸ್ತೆಯುದ್ದಕ್ಕೂ ವಾಹನಗಳು ಜಖಂ ಆಗಿವೆ. ಬಸ್, ಶಾಲಾ ವಾಹನ, ಆಟೋ, ಕಾರುಗಳು ಜಖಂ ಆಗಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.
ಬಿರುಗಾಳಿ ಸಹಿತ ಧಾರಾಕಾರ ಮಳೆಗೆ 30 ಕ್ಕೂ ಹೆಚ್ಚು ಮನೆಗಳು ಮತ್ತು ಮನೆಯಲ್ಲಿದ್ದ ವಸ್ತುಗಳಿಗೂ ಹಾನಿ.
ಮೈಸೂರಿನಲ್ಲಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ 30 ಕ್ಕೂ ಹೆಚ್ಚು ಮನೆಗಳು ಮತ್ತು ಮನೆಯಲ್ಲಿದ್ದ ವಸ್ತುಗಳಿಗೂ ಹಾನಿಯಾಗಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಮೇದಿನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ.
ಗ್ರಾಮದ ಹಲವು ಮನೆಗಳ ಗೋಡೆಗಳು ಕುಸಿದಿದ್ದು, ಮನೆಯಲ್ಲಿದ್ದ ಹಸು, ಕುರಿಗಳಿಗೂ ಗಾಯಗಳಾಗಿವೆ. ಬಿರುಗಾಳಿಗೆ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿದ್ದು ತಡರಾತ್ರಿ ಸುರಿದ ಒಂದೇ ದಿನದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಅಪಾರ ಪ್ರಮಾಣದ ಹಾನಿ ಹಿನ್ನೆಲೆ ಪರಿಹಾರಕ್ಕಾಗಿ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Key words: storm, heavy rains, Mysore, district