ಬೆಂಗಳೂರು, ಫೆಬ್ರವರಿ,20,2024(www.justkannada.in): ಕಾಡಾನೆ ದಾಳಿಗೆ ಬಲಿಯಾಗಿದ್ದ ಕೇರಳ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದು, ನನ್ನ ತೆರಿಗೆ ನನ್ನ ಹಕ್ಕು ಎನ್ನುವ ಬದಲು ನನ್ನ ತೆರಿಗೆ ಕಾಂಗ್ರೆಸ್ ಗೆ ಅಂತ ಬದಲಿಸಿಕೊಳ್ಳಿ ಎಂದು ಲೇವಡಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಾಡಾನೆ ದಾಳಿಗೆ ಬಲಿಯಾಗಿದ್ದ ಕೇರಳ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಕೊಟ್ಟಿದ್ದೀರಿ, ಇಲ್ಲಿ ಆನೆ ತುಳಿತಕ್ಕೆ ಸತ್ತರೆ 5 ಲಕ್ಷ ರೂಪಾಯಿ ಕೊಡುತ್ತೀರಿ. ಆದರೆ ರೈತರು ಪರಿಹಾರ ಕೇಳಿದರೆ ಕೊಡಲ್ಲ. ನನ್ನ ತೆರಿಗೆ ನನ್ನ ಹಕ್ಕು ಅನ್ನುವ ಬದಲು ನನ್ನ ತೆರಿಗೆ ಕಾಂಗ್ರೆಸ್ಗೆ ಅಂತ ಬದಲು ಮಾಡಿಕೊಳ್ಳಿ ಎಂದು ಹರಿಹಾಯ್ದರು.
ನಮ್ಮ ರಾಜ್ಯದ ಜನರ ಬೆವರಿನ ತೆರಿಗೆ ಹಣವನ್ನು ಪಕ್ಕದ ರಾಜ್ಯದವರಿಗೆ ಪರಿಹಾರ ಕೊಟ್ಟಿದ್ದೀರಿ. ನಮ್ಮ ರಾಜ್ಯದ ರೈತರಿಗೆ ಪರಿಹಾರ ಕೊಡಲು ನಿಮ್ಮ ಬಳಿ ಹಣ ಇಲ್ಲ. ಈ ರೀತಿ ಪರಿಹಾರ ಕೊಟ್ಟಿರುವುದು ಅತ್ಯಂತ ಖಂಡನಿಯ. ಮಾನವೀಯತೆಯಿಂದ ಪರಿಹಾರ ಕೊಟ್ಟರೆ ಪರವಾಗಿಲ್ಲ. ಅವರ ಪಕ್ಷದ ನಾಯಕರನ್ನು ಓಲೈಕೆ ಮಾಡಲು ಈ ರೀತಿ ಮಾಡುವುದು ಸರಿಯಲ್ಲ. ಈ ರೀತಿ ಮಾಡಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಯಾಕೆ ಹೋರಾಟ ಮಾಡುತ್ತೀರಾ? ಓಲೈಕೆ ರಾಜಕಾರಣ ಮಾಡಲು ಈ ರೀತಿಯಾದ ಕೆಲಸ ಮಾಡುತ್ತಿದ್ದೀರಾ? ಎಂದು ಕಿಡಿಕಾರಿದರು.
Key words: tax – right-change – Congress- former CM –HD Kumaraswamy