ಬೆಂಗಳೂರು,ಜುಲೈ,6,2023(www.justkannada.in): ಸರ್ಕಾರದ ವಿರುದ್ದ ವರ್ಗಾವಣೆ ದಂಧೆ ಆರೋಪ ಮಾಡಿ ಸಾಕ್ಷ್ಯ ಇರುವ ಪೆನ್ ಡ್ರೈವ್ ಬಿಡುಗಡೆ ಮಾಡುವುದಾಗಿ ಹೇಳಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕುತ್ತೇನೆ. ದಯಮಾಡಿ ಪೆನ್ ಡ್ರೈವ್ ಬಿಡುಗಡೆ ಮಾಡಲಿ. ನನ್ನ ಬಳಿಯೂ ಬಿಜೆಪಿ ಮತ್ತು ಹೆಚ್.ಡಿ ಕುಮಾರಸ್ವಾಮಿಯ ಕರ್ಮಾಕಾಂಡಗಳ ಪೆನ್ ಡ್ರೈವ್ ಇದೆ. 14 ತಿಂಗಳು ಪಂಚತಾರ ಹೋಟೆಲ್ ನಲ್ಲಿದ್ದರಲ್ಲಾ ಅಲ್ಲಿನ ನಿಮ್ಮ ವಹಿವಾಟು ಈ ಪೆನ್ ಡ್ರೈವ್ ನಲ್ಲಿದೆ. ನೀವು ಬಿಡುಗಡೆ ಮಾಡಿದ ಒಂದು ಗಂಟೆಯಲ್ಲಿ ನಾನೂ ಸಹ ನಿಮ್ಮ ಕರ್ಮಕಾಂಡಳಿರುವ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗುಡುಗಿದರು.
ಬೆಂಗಳೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಹೆಚ್.ಡಿ ಕುಮಾರಸ್ವಾಮಿ ಮಹಾನ್ ಸುಳ್ಳುಗಾರ ಹಿಟ್ ಅಂಡ್ ರನ್ ಸ್ಟೇಟ್ ಮೇಂಟ್ ಮಾಡುವುದು. ಆರೋಪ ಮಾಡಿ ಓಡಿ ಹೋಗುವ ವ್ಯಕ್ತಿ ಅಂದ್ರೆ ಅದು ಹೆಚ್ ಡಿಕೆ. ಇದು ರಾಜ್ಯದ ದುರಂತ. ಕಳೆದ 10 ವರ್ಷಗಳಿಂದ ಆಪಾದನೆ ಮಾಡುವುದನ್ನ ಬಿಟ್ಟರೇ ಸಾಬೀತು ಮಾಡಿಲ್ಲ ಎಂದು ಕುಟುಕಿದರು.
ವರ್ಗಾವಣೆ ದಂಧೆ ನಡೆಯುತ್ತಿದೆ ಚೆಸ್ಕಾಂ ಬೆಸ್ಕಾಂ ಹುದ್ದೆಗಳಿಗೆ 10 ಕೋಟಿ ಲಂಚ ಕೊಡುವ ವ್ಯವಸ್ಥೆ ಇದೆ ಎಂದು ಹೆಚ್.ಡಿಕೆ ಆರೋಪಿಸಿದ್ದಾರೆ . ಯಾವುದೇ ಹುದ್ದೆಗೆ 10 ಕೊಟಿ ಕೊಟ್ಟು ಖರೀದಿ ಮಾಡುವುದು ಇದೆಯಾ..? ಒಂದು ದಿನಕ್ಕೆ 50 ಲಕ್ಷ ಸಂಪಾದನೆ ಇರುವ ಹುದ್ದೆಗಳು ಎನ್ನುತ್ತಿದ್ದಾರೆ ಎಲ್ಲಾದರೂ ಒಂದು ದಿನಕ್ಕೆ 50 ಲಕ್ಷ ರೂ ಸಂಪಾದನೆಯಾಗುವ ಹುದ್ದೆಗಳು ಇದೆಯಾ ಎಂದು ಚಾಟಿ ಬೀಸಿದರು.
ಹೆಚ್ಡಿಕೆ ಹತಾಶ ರಾಗಿದ್ದಾರೆ. 30 ಸೀಟು, 40 ಸೀಟು ಗೆದ್ದು ಮೂರನೇ ಬಾರಿಗೆ ಸಿಎಂ ಆಗೋಣ ಎಂದು ಚುನಾವಣೆಗೆ ಹೋದ್ರಿ. ಆದರೆ ನಿಮಗೆ ಸಿಕ್ಕಿದ್ದು ಕೇವಲ 19 ಸೀಟ್ ಅಷ್ಟೆ. ಹಳೆ ಮೈಸೂರು ಭಾಗದವರು ನಿಮ್ಮ ಜನಾಂಗದವರು, ಬೇರೆ ಜನಾಂಗದವರೂ ನಿಮ್ಮನ್ನ ನಂಬುತ್ತಿಲ್ಲ. ಬಿಜೆಪಿಯವರಿಂದ ಸುಫಾರಿ ಪಡೆದು ಕಾಂಗ್ರೆಸ್ ವಿರುದ್ದ ದಂಧೆ ಆರೋಪ ಮಾಡುತ್ತಿದ್ದೀರಾ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.
ಡಿಕೆಶಿ ವರ್ಚಸ್ಸು ನಿಮಗೆ ತಡೆಯಲು ಆಗುತ್ತಿಲ್ಲ. ಹೀಗಾಗಿ ಸುಳ್ಳುಸುಳ್ಳು ಆರೋಪ ಮಾಡುತ್ತಿದ್ದೀರಿ. ನಿಮ್ಮ ವರ್ಚಸ್ಸು ಸಂಪೂರ್ಣ ಕಡಿಮೆಯಾಗಿದೆ. ನಿಮ್ಮ ಸಮುದಾಯದವರೇ ನಿಮ್ಮನ್ನ ನಂಬುತ್ತಿಲ್ಲ. ನೀವು ಮುಂದೇ ಯಾವುದೇ ಚುನಾವಣೆಯಲ್ಲಿ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.
ವರ್ಗವಣೆ ದಂಧೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದೀರಿ. ಹಣ ಪಡೆದು ವರ್ಗಾವಣೆ ಮಾಡಿರುವುದನ್ನ ಸಾಬೀತು ಪಡಿಸಿ ನೋಡೋಣ. ಸಿದ್ದರಾಮಯ್ಯ ಆ ರೀತಿ ಮಾಡುವ ವ್ಯಕ್ತಿಯಲ್ಲ. ಸುಮ್ಮನೆ ಯಾಕೆ ಇಲ್ಲ ಸಲ್ಲದ ಆರೋಪ ಮಾಡುತ್ತೀರಿ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.
Key words: Transfer –racket- allegation-KPCC-M. Laxman – HDK