ನವದೆಹಲಿ, ನವೆಂಬರ್ 24,2021(www.justkannada.in): ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಾಪಸ್ ಪಡೆಯುವುದಾಗಿ ಭರವಸೆ ನೀಡಿತ್ತು. ಇದೀಗ ಕಾಯ್ದೆಗಳನ್ನ ರದ್ಧುಪಡಿಸಲು ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಗುರುನಾನಕ್ ಜಯಂತಿಯ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, “ಎಲ್ಲಾ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ. ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ , ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು. ಆದರೆ ಅಂತಹ ಪವಿತ್ರವಾದ, ಸಂಪೂರ್ಣ ಶುದ್ಧವಾದ ರೈತರ ಅನುಕೂಲಕ್ಕಾಗಿ ನಾವು ಪ್ರಯತ್ನಿಸಿದರೂ ಅದನ್ನು ಕೆಲವು ರೈತರಿಗೆ ವಿವರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಎಲ್ಲಾ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ,” ಎಂದು ಹೇಳಿದ್ದರು.
ಇದೀಗ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿ ತಿದ್ದುಪಡಿ ಕಾಯ್ದೆಗಳನ್ನ ವಾಪಸ್ ಪಡೆಯಲು ಒಪ್ಪಿಗೆ ನೀಡಲಾಗಿದೆ. 3 ಕಾಯ್ದೆಗಳನ್ನ ವಾಪಸ್ ಪಡೆಯಲು ಸಂಪುಟದಿಂದ ಶಿಫಾರಸ್ಸು ಮಾಡಲಾಗಿದೆ. ಮುಂದಿನ ಅಧಿವೇಶನದಲ್ಲಿ ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಗೋರ್ ತಿಳಿಸಿದ್ದಾರೆ.
Key words: Union Cabinet – approved – withdrawal – three Agriculture Amendment Acts.