ನವದೆಹಲಿ:ಆ-4:(www.justkannada.in) ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಜರ್ಮನಿ ಸರ್ಕಾರಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿವೆ.
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉದ್ಭವಿಸಿರುವ ಆತಂಕಕಾರಿ ವಾತಾವರಣ ಹಿನ್ನಲೆಯಲ್ಲಿ ತನ್ನ ನಾಗರಿಕರಿಗೆ ಕಾಶ್ಮೀರ ಕಣಿವೆಗಳಿಗೆ ತೆರಳದಂತೆ ಸೂಚನೆ ನೀಡಿವೆ. ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯನ್ನು ತಕ್ಷಣ ರದ್ದುಗೊಳಿಸಿ, ಪ್ರವಾಸಿಗರನ್ನು ವಾಪಸ್ ಕಳಿಸುತ್ತಿರುವ ಬೆನ್ನಲ್ಲೇ, ಉಗ್ರರ ದಾಳಿ ನಡೆಯುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ, ಜರ್ಮನಿ ಮತ್ತು ಯುನೈಟೆಡ್ ಕಿಂಗ್ಡಮ್ ತಮ್ಮ ನಾಗರಿಕರಿಗೆ ಈ ಎಚ್ಚರಿಕೆ ನಿಡಿದೆ.
ಕಣಿವೆ ರಾಜ್ಯದಲ್ಲಿ ಬಾಂಬ್ ಸ್ಫೋಟಗಳು, ಗ್ರೆನೇಡ್ ದಾಳಿಗಳು, ಗುಂಡಿನ ದಾಳಿ ಮತ್ತು ಅಪಹರಣ ಸೇರಿದಂತೆ ಅನಿರೀಕ್ಷಿತ ಹಿಂಸಾಚಾರದ ಅಪಾಯವಿದೆ ಎಂದು ಬ್ರಿಟಿಷ್ ವಿದೇಶಾಂಗ ಕಚೇರಿ ಹೇಳಿದೆ.
ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಪಟ್ಟಿ ಮಾಡಿರುವ ಬ್ರಿಟನ್ ಕೂಡ ಶ್ರೀನಗರ ನಗರ, ಜಮ್ಮು-ಕಾಶ್ಮೀರ ಸೇರಿದಂತೆ ಯಾವುದೇ ಪ್ರವಾಸಿ ತಾಣಗಳಿಗೆ ತೆರಳದಂತೆ ತಿಳಿಸಿದೆ. ಅಲ್ಲದೇ ಒಂದೊಮ್ಮೆ ಜಮ್ಮು ಮತ್ತು ಕಾಶ್ಮೀರದಲ್ಲಿದ್ದರೆ, ನೀವು ಜಾಗರೂಕರಾಗಿರಬೇಕು, ಸ್ಥಳೀಯ ಅಧಿಕಾರಿಗಳ ಸಲಹೆಯನ್ನು ಪಾಲಿಸಬೇಕು ಮತ್ತು ಈ ಪ್ರಯಾಣದ ಸಲಹೆಯನ್ನೂ ಒಳಗೊಂಡಂತೆ ಎಚ್ಚರಿಕೆಯನ್ನು ಮೀರದಂತೆ ಸಲಹೆ ನೀಡಿದೆ.
ಕಾಶ್ಮೀರದಲ್ಲಿ (ವಿಶೇಷವಾಗಿ ಕಾಶ್ಮೀರ ಕಣಿವೆ ಮತ್ತು ಅಮರನಾಥ ಯಾತ್ರಾ ಮಾರ್ಗ) ಉಳಿದುಕೊಂಡಿರುವ ಪ್ರಯಾಣಿಕರು ಜಮ್ಮು ಮತ್ತು ಕಾಶ್ಮೀರವನ್ನು ತೊರೆಯುವಂತೆ ಸೂಚಿಸಲಾಗಿದೆ” ಎಂದು ಜರ್ಮನಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಆಸ್ಟ್ರೇಲಿಯಾ ತನ್ನ ನಾಗರಿಕರಿಗೆ “ಭಯೋತ್ಪಾದಕ ಚಟುವಟಿಕೆಯ ಹೆಚ್ಚಿನ ಬೆದರಿಕೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ” ತಿಳಿಸಿದೆ.
ದೇಶ, ವಿದೇಶಗಳ ಪ್ರವಾಸಿಗರು, ಯಾತ್ರಾರ್ಥಿಗರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರನ್ನು ಒಳಗೊಂಡಂತೆ ಸಾವಿರಾರುಜನರು ಈಗಾಗಲೇ ಕಾಶ್ಮೀರ ಕಣಿವೆಯಿಂದ ಹೊರನಡೆಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಶುಕ್ರವಾರ ಬಸ್ಸುಗಳನ್ನು ಕಳುಹಿಸಿ, ಕೂಡಲೇ ವಿವಿಧ ಪ್ರವಾಸಿ ತಾಣಗಳಲ್ಲಿರುವ ಪ್ರವಾಸಿಗರನ್ನು ಶ್ರೀನಗರಕ್ಕೆ ಕರೆತರುತ್ತಿದೆ.