ಬೆಂಗಳೂರು:ಜುಲೈ-19:(www.justkannada.in) ಅಂಗವಿಕಲ ಮಗನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ತಂದೆಯೇ 5 ವರ್ಷದ ಮಗನನ್ನು ಕೊಲೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಆರೋಪಿಗಳಾದ ಬಾಲಕನ ತಂದೆ ದಾವಣಗೆರೆ ಮೂಲದ ಜಯಪ್ಪ (36) ಹಾಗೂ ಮಾಗಡಿ ರಸ್ತೆ ಠಾಣೆ ರೌಡಿಶೀಟರ್ ರಾಜಾಜಿನಗರದ ಮಹೇಶ್(37)ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಳೇ ಆರೋಪಿಗಳ ಚಲನವಲನಗಳ ಕುರಿತು ನಿಗಾ ಇರಿಸುವಂತೆ ಹಿರಿಯ ಅಧಿಕಾರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳ ತಂಡ ಮಹೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಬಾಲಕನ ಕೊಲೆ ರಹಸ್ಯ ಬಯಲಾಗಿದೆ.
ಕೂಲಿ ಕೆಲಸ ಹುಡುಕಿಕೊಂಡು ಜಯಪ್ಪ ತನ್ನ ನಾಲ್ವರು ಮಕ್ಕಳು ಮತ್ತು ಪತ್ನಿ ಜೊತೆ ಬೆಂಗಳೂರಿಗೆ ಬಂದಿದ್ದ. ನಂದಿನಿ ಲೇಔಟ್ನಲ್ಲಿ ಬಾಡಿಮನೆ ಪಡೆದು ವಾಸವಾಗಿದ್ದ. ನಾಲ್ವರು ಮಕ್ಕಳ ಪೈಕಿ ಮೂರನೇ ಮಗ ಬಸವರಾಜುಗೆ ನಡೆದಾಡಲು ಮತ್ತು ಮಾತನಾಡಲು ಬರುತ್ತಿರಲಿಲ್ಲ. ದಾವಣಗೆರೆ ಮತ್ತು ಬೆಂಗಳೂರಿನ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸುಧಾರಣೆ ಕಂಡು ಬಂದಿರಲಿಲ್ಲ. ಈ ನಡುವೆ ಜಯಪ್ಪನಿಗೆ ಅದೇ ಪ್ರದೇಶದಲ್ಲಿ ಆಟೋ ಚಾಲಕನಾಗಿದ್ದ ರೌಡಿ ಮಹೇಶನ ಪರಿಚಯವಾಗಿತ್ತು. ಮಗನಿಗೆ ಇರುವ ಆರೋಗ್ಯ ಸಮಸ್ಯೆ ಮತ್ತು ಆತನ ಚಿಕಿತ್ಸೆಗಾಗಿ ನಿತ್ಯ 1 ಸಾವಿರ ರೂ. ಖರ್ಚು ಮಾಡುತ್ತಿರುವ ಕುರಿತು ಮಹೇಶನ ಬಳಿ ಜಯಪ್ಪ ಹೇಳಿಕೊಂಡಿದ್ದ. ಹೀಗೆ ಹಣ ಖರ್ಚು ಮಾಡುತ್ತಿದ್ದರೆ ತನ್ನ ಬಳಿ ಒಂದು ರೂ. ಕೂಡ ಉಳಿಯುವುದಿಲ್ಲ. ಇದಕ್ಕೆ ಏನಾದರೂ ಪರಿಹಾರ ಸೂಚಿಸಲು ಹೇಳಿದ್ದ. ಆಗ ಇಬ್ಬರೂ ಸೇರಿ ಮಗನನ್ನೇ ಕೊಲೆ ಮಾಡುವ ಕುರಿತು ಪ್ಲ್ಯಾನ್ ಮಾಡಿದ್ದರು.
ಬಾಲಕನನ್ನು ಇಂಜೆಕ್ಷನ್ ಕೊಟ್ಟು ಕೊಲೆ ಮಾಡುತ್ತೇನೆ. ಅದಕ್ಕೆ 50 ಸಾವಿರ ರೂ. ಬೇಕಾಗುತ್ತದೆ’ ಎಂದು ಮಹೇಶ್, ಜಯಪ್ಪನಿಗೆ ಹೇಳಿದ್ದ. ಅದಕ್ಕೆ ಒಪ್ಪಿದ ಜಯಪ್ಪ ‘ಕೆಲಸ ಮುಗಿದ ಬಳಿಕ ಹಣ ಕೊಡುತ್ತೇನೆ’ ಎಂದು ತಿಳಿಸಿದ್ದ. ಜಯಪ್ಪ ತನ್ನ ಮನೆಗೇ ಮಹೇಶನನ್ನು ಕರೆಸಿಕೊಂಡಿದ್ದ. ಮಹೇಶ್ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದ. ನಂತರ ಬಾಲಕನ ಶವವನ್ನು ಜಯಪ್ಪನೇ ಗೊರಗುಂಟೆಪಾಳ್ಯದಲ್ಲಿರುವ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿದ್ದ. ಆದರೆ ಕೆಲಸ ಮುಗಿದ ನಂತರ ಕೇವಲ 5 ಸಾವಿರ ರೂ. ನೀಡಿದ್ದ. ಪದೇಪದೆ ಮಹೇಶ್ ಹಣ ಕೇಳಿದರೂ ಕೊಡದೆ ಸತಾಯಿಸುತ್ತಿದ್ದ. ಹಳೆಯ ಆರೋಪಿಗಳ ಚಲನವಲನ ಕುರಿತು ನಿಗಾ ಇರಿಸುವಂತೆ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪೊಲೀಸರು ಮಹೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, 45 ದಿನಗಳ ಹಿಂದೆ ನಡೆದಿದ್ದ ಬಾಲಕನ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕನ ಕೊಲೆ ಮಾಡುವಾಗ ಮನೆಯಲ್ಲಿ ಆತನ ತಾಯಿ ಇರಲಿಲ್ಲ. ಪತ್ನಿ ಮತ್ತು ಮಕ್ಕಳನ್ನು ಹೊರಗೆ ಕಳುಹಿಸಿದ್ದೆ ಎಂದು ಜಯಪ್ಪ ವಿಚಾರಣೆ ವೇಳೆ ಹೇಳಿದ್ದಾನೆ. ಆದರೆ, ಪತ್ನಿಯನ್ನು ರಕ್ಷಿಸಲು ಜಯಪ್ಪ ಸುಳ್ಳು ಹೇಳುತ್ತಿರಬಹುದು. ಈ ಕುರಿತು ನಂದಿನಿ ಲೇಔಟ್ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.