ಬೆಂಗಳೂರು,ಆ,27,2019(www.justkannada.in): ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ವತಿಯಿಂದ ಆಗಸ್ಟ್.29ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ದಿನೇಶ್ ಗುಂಡೂರಾವ್ ಮತ್ತು ವಿ.ಎಸ್ ಉಗ್ರಪ್ಪ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಮಾತನಾಢಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸಾಕಷ್ಟು ಹಾನಿಯಾಗಿದೆ. ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಸರ್ಕಾರದ ವಿರುದ್ಧ ನಾಡಿದ್ದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೂ ಗೌರವ ಕೊಡಿ. ಸಿದ್ದರಾಮಯ್ಯ ಎಷ್ಟು ಸರ್ವಪಕ್ಷ ಸಭೆ ನಡೆಸಿದ್ರು. ಇಂತ ಪರಿಸ್ಥಿತಿಯಲ್ಲೂ ನೀವೇಕೆ ಸರ್ವಪಕ್ಷ ಸಭೆ ಕರೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರದ ವೇಳೆ ಟೇಕಾಫ್ ಆಗಿಲ್ಲವೆನ್ನುತ್ತಿದ್ದರು. ಸರ್ಕಾರ ಬೀಳಿಸುವ ಷಡ್ಯಂತ್ರವನ್ನು ಮಾಡಿದ್ರು. ಪ್ರಥಮ ದಿನದಿಂದಲೂ ಉರುಳಿಸುವ ಪ್ರಯತ್ನ ನಡೆಸಿದ್ರು. ಅವರಿಗೆ ಅಂದು ಅಧಿಕಾರವೇ ಮುಖ್ಯವಾಗಿತ್ತು. ಹೀಗಾಗಿ ನೂರಾರು ಕೋಟಿ ಖರ್ಚು ಮಾಡಿ ಸರ್ಕಾರ ಉರುಳಿಸಿದ್ರು. ಒಬ್ಬೊಬ್ಬ ಶಾಸಕನಿಗೆ ೨೫,೩೦ ಕೋಟಿ ನೀಡಿದ್ರು. ಆಪರೇಷನ್ ಕಮಲದ್ದೇ ಫಂಡ್ ಮಾಡಿಕೊಂಡಿದ್ದರು. ಆದರೆ ಇಂದು ಅವರಿಗೆ ತಪ್ಪಿನ ಅರಿವಾಗುತ್ತಿದೆ. ಸರ್ಕಾರ ಅಧೋಗತಿಗೆ ತೆರಳುತ್ತಿದೆ ಎಂದು ಕಿಡಿಕಾರಿದರು.
ಒನ್ ಮ್ಯಾನ್ ಆರ್ಮಿಯಾಗಿ ಬಿಎಸ್ ವೈ ಮೊದಲು ಕೆಲಸ ಮಾಡಿದ್ರು. ಮಂತ್ರಿ ಮಂಡಲ ರಚಿಸಿದ್ರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಖಾತೆ ಹಂಚಿಕೆ ಆದ ಮೇಲೆ ಮತ್ತಷ್ಟು ಅಸಮಾಧಾನ ಎದ್ದಿದೆ. ಬಿಜೆಪಿ ಪಕ್ಷದಲ್ಲಿಯೇ ಅಸಮಾಧಾನ ಎದ್ದಿದೆ. ರಾಜ್ಯಾಧ್ಯಂತ ಪ್ರತಿಭಟನೆ ನಡೆಯುತ್ತಿವೆ. ಬಿಜೆಪಿ ಪಕ್ಷದಲ್ಲೇ ಮೂರು ಅತೃಪ್ತ ತಂಡ ನಿರ್ಮಾಣವಾಗಿದೆ ಎಂದು ದಿನೇಶ್ ಗುಂಡೂರಾವ್ ಹೊಸ ಬಾಂಬ್ ಸಿಡಿಸಿದರು.
ವಿಧಾನಸೌದದಲ್ಲಿ ಬ್ಲ್ಯೂ ಫಿಲಂ ನೋಡಿದವರಿಗೆ ಡಿಸಿಎಂ ಪಟ್ಟ..
ವಿಧಾನಸೌದದಲ್ಲಿ ಬ್ಲ್ಯೂ ಫಿಲಂ ನೋಡಿದವರಿಗೆ ಡಿಸಿಎಂ ಮಾಡಿದ್ದಾರೆ ಎಂದು ಟೀಕಿಸಿದ ದಿನೇಶ್ ಗುಂಡೂರಾವ್, ಸಿಎಂ,ಡಿಸಿಎಂ ಆದವರನ್ನ ಡೀಗ್ರೇಡ್ ಮಾಡಿದ್ದಾರೆ. ಅಶೋಕ್, ಶೆಟ್ಟರ್, ಈಶ್ವರಪ್ಪ ಸ್ವಾಭಿಮಾನ ಕಳೆದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಮಂತ್ರಿಯಾಗಿದ್ದೇ ಮೊದಲ ತಪ್ಪು. ಅವರ ಅಧಿಕಾರದಲ್ಲಿ ಶಾಸಕರಾಗಿದ್ದವರು ಡಿಸಿಎಂ ಆಗಿದ್ದಾರೆ. ಇವರ ಕೈಕೆಳಗೆ ಅದೇಗೆ ಈ ಮೂವರು ಕೆಲಸ ಮಾಡ್ತಾರೋ. ಅವರ ಹೈಕಮಾಂಡ್ ಸರ್ವಾಧಿಕಾರಿಯಂತೆ ನಡೆದುಕೊಳ್ತಿದೆ. ಪ್ರತಿಪಕ್ಷದವರನ್ನೇ ಬಿಜೆಪಿ ಹೈಕಮಾಂಡ್ ಬಿಡ್ತಿಲ್ಲ. ಅಸಮಾಧಾನವಿದ್ದರೂ ಹೈಕಮಾಂಡ್ ವಿರುದ್ಧ ಮಾತನಾಡಲಾಗ್ತಿಲ್ಲ. ಎಲ್ಲವನ್ನೂ ನುಂಗಿಕೊಂಡೇ ಇರಬೇಕಾದ ಸ್ಥಿತಿ ಅವರಿಗೆ ಬಂದಿದೆ ಎಂದು ಲೇವಡಿ ಮಾಡಿದರು.
ಎಂಜಿನ್ ಆನ್ ಆಗಿಲ್ಲ,ಇನ್ನ ಟೇಕಾಫ್ ಆಗೋದು ಯಾವಾಗ
17 ಸಚಿವರಿಗೆ ಮೂರು ಡಿಸಿಎಂ ಮಾಡಿದ್ದಾರೆ. ಉಳಿದ ೧೫ ಖಾತೆಗಳಲ್ಲಿ ಇನ್ನೆಷ್ಟು ಡಿಸಿಎಂ ಮಾಡ್ತಾರೋ. ಇಂತ ಕೆಟ್ಟ ಪರಿಸ್ಥಿತಿ ಬಿಜೆಪಿ ಸರ್ಕಾರ ಎದುರಿಸುತ್ತಿದೆ. ಎಂಜಿನ್ ಆನ್ ಆಗಿಲ್ಲ,ಇನ್ನ ಟೇಕಾಫ್ ಆಗೋದು ಯಾವಾಗ ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನ ಇವತ್ತು ಬಾಯಿ ಬಡಿದುಕೊಳ್ಳುವಂತಾಗಿದೆ. ಬಿಜೆಪಿಯವರಿಗೆ ಅಭಿವೃದ್ಧಿಗಿಂತ ಅಧಿಕಾರವೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.
ರಾಜ್ಯದ ಪ್ರವಾಹದ ಬಗ್ಗೆ ಒಂದು ಹೇಳಿಕೆ ನೀಡಿಲ್ಲ. ಪ್ರಧಾನ ಮಂತಿ ಮೋದಿ ಸ್ಟೇಟ್ ಮೆಂಟ್ ಮಾಡಿಲ್ಲ.ಅಮಿತ್ ಶಾ ಬಂದ್ರು ಹೋದ್ರು. ಅದೇ ನಾವೇನಾದ್ರೂ ಮಾಡಿದ್ರೆ ಮರ್ಯಾದೆ ಹರಾಜಾಕ್ತಿದ್ರು. ಇವತ್ತು ಯಾಕೆ ಪ್ರಧಾನಿ ಇತ್ತ ತಿರುಗಿಲ್ಲ. ಇದು ಹೀಗೇ ಹೋದ್ರೆ ನಾವು ದೆಹಲಿಯಲ್ಲೇ ಪ್ರತಿಭಟನೆ ನಡೆಸಬೇಕಾಗುತ್ತದೆ. ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.
ಮಧ್ಯಂತರ ಚುನಾವಣೆ ಬರುತ್ತೆಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಮಧ್ಯಂತರ ಚುನಾವಣೆ ಬಂದರೆ ಒಳ್ಳೆಯದು. ಉಪಚುನಾವಣೆಗೆ ನಾವು ಸಿದ್ಧತೆ ನಡೆಸಿದ್ದೇವೆ. 17 ಕ್ಷೇತ್ರಗಳಲ್ಲೂ ಅಬ್ಸರ್ವರ್ಸ್ ಹಾಕಿದ್ದೇವೆ. ಅಭ್ಯರ್ಥಿ ಆಯ್ಕೆ,ಸಂಘಟನೆಗೆ ಒತ್ತು ನೀಡಿದ್ದೇವೆ ಎಂದರು.
ನಿಮಗೆ ಸ್ವಾಭಿಮಾನ ಇದ್ದರೆ ಮೊದಲು ರಾಜೀನಾಮೆ ಕೊಡಿ- ಮಾಜಿ ಸಂಸದ ವಿ.ಎಸ್.ಉಗ್ರಪ್ಪ
ಇದೇ ವೇಳೆ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಯೋಗ,ಯೋಗ್ಯತೆ ಬಿಜೆಪಿ ಸರ್ಕಾರಕ್ಕೆ ಇರಬೇಕು. ಸಿಎಂ ಸೇರಿ ೧೮ ಮಂದಿ ಸಚಿವರಿದ್ದಾರೆ. ಬಿಎಸ್ ವೈ, ಸವದಿ, ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಸಿ.ಟಿ.ರವಿ ಸೇರಿ ಹಲವರ ಮೇಲೆ ಕ್ರಿಮಿನಲ್ ಕೇಸ್ ಪೆಂಡಿಂಗ್ ಇವೆ. ಕ್ರಿಮಿನಲ್ ಕೇಸ್ ಇರುವವರಿಗೆ ಯೋಗ್ಯತೆ ಇದೆಯೇ ೆಂದು ಪ್ರಶ್ನಿಸಿದರು.
ಸಿ.ಟಿ.ರವಿ,ಶೆಟ್ಟರ್,ಈಶ್ವರಪ್ಪ,ಅಶೋಕ್ ಪಕ್ಷ ಕಟ್ಟಿದವರು ಅಂತವರಿಗೆ ಡಿಸಿಎಂ ಹುದ್ದೆಯನ್ನ ಕೊಟ್ಟಿಲ್ಲ. ನೀವು ಡಿಸಿಎಂಗೆ ಲಾಯಕ್ಕಿಲ್ಲ,ಸಚಿವರಾಗೋಕೆ ಮಾತ್ರ ಲಾಯಕ್ ಅಂತ ಹೇಳಿದ್ದಾರೆ. ಅವರ ಹೈಕಮಾಂಡ್ ಹೇಳಿ ಕೈಕೊಟ್ಟಿದೆ. ನಿಮಗೆ ಸ್ವಾಭಿಮಾನ ಇದ್ದರೆ ಮೊದಲು ರಾಜೀನಾಮೆ ಕೊಡಿ. ನಿಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ. ಇಲ್ಲವಾದರೆ ಜನರೇ ನಿಮಗೆ ಬುದ್ದಿ ಕಲಿಸ್ತಾರೆ ಹಿರಿಯ ಬಿಜೆಪಿ ನಾಯಕರಿಗೆ ಉಗ್ರಪ್ಪ ಲೇವಡಿ ಮಾಡಿದರು.
ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಸಾಕಷ್ಟು ಹಾನಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಉಗ್ರಪ್ಪ, ೨೦೦೯ ರಲ್ಲಿ ಪ್ರವಾಹ ಆದಾಗ ಮನಮೋಹನ್ ಸಿಂಗ್ ಬಂದಿದ್ದರು. ರಾಜ್ಯಕ್ಕೆ ಭೇಟಿ ಕೊಟ್ಟು ತಕ್ಷಣವೇ ಪರಿಹಾರ ಘೋಷಿಸಿದ್ದರು. ಆದರೆ ಪ್ರಧಾನಿ ರಾಜ್ಯಕ್ಕೆ ಭೇಟಿಯನ್ನೂ ನೀಡಲಿಲ್ಲ. ಪ್ರವಾಹದಿಂದಾದ ಹಾನಿಗೆ ನೆರವನ್ನೂ ಘೋಷಿಸಲಿಲ್ಲ. ಇದರ ಬಗ್ಗೆ ನಾಡಿದ್ದು ಉಗ್ರ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದರು.
Key words: Utter failure – flood situation- KPCC president- Dinesh Gundurao