ಬೆಳಗಾವಿ, ಡಿಸೆಂಬರ್,11,2023(www.justkannada.in): ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ವೇಳೆಯೇ ಇಂತಹ ಅಮಾನವೀಯ ಘಟನೆ ನಡೆದಿದೆ. ಯುವಕ ಪ್ರೀತಿಸಿದ ಯುವತಿ ಜೊತೆ ಓಡಿ ಹೋಗಿದ್ದಕ್ಕೆ ಯುವತಿಯ ಮನೆಯವರು ಯುವಕನ ಮನೆಗೆ ನುಗ್ಗಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಗೆ ತೆರಳಿ ಗಾಯಾಳು ಮಹಿಳೆಯ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತೆಯಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್, ನಿನ್ನೆ ರಾತ್ರಿ 12.30ರ ಸುಮಾರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ದುಂಡಪ್ಪ ಯುವಕ 18 ವರ್ಷದ ಯುವತಿಯನ್ನು ಕರೆದುಕೊಂಡು ಓಡಿ ಹೋಗಿದ್ದಾರೆ. ಯುವತಿ ಕುಟುಂಬದವರು ಆಗಮಿಸಿ ಈ ರೀತಿ ಕೃತ್ಯವೆಸಗಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಘಟನೆಗೆ ಕಾರಣರಾದ 7 ಜನರನ್ನು ಬಂಧಿಸಲಾಗಿದೆ. ಇದು ಬಹಳ ಅನಿರೀಕ್ಷಿತ ಘಟನೆ ಓಡಿ ಹೋದ ಯುವಕ ಯುವತಿ ಇನ್ನೂ ಪತ್ತೆಯಾಗಿಲ್ಲ. ಪತ್ತೆಗೆ ಕ್ರಮ ವಹಿಸಲಾಗಿದೆ. ಇದು ಯಾರಿಗೂ ಗೌರವ ತರುವಂತ ಕೆಲಸ ಅಲ್ಲ. ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದರು.
Key words: Woman – Assault –Case-Home Minister -Dr. G. Parameshwar -visited – village