ಬೆಂಗಳೂರು, ಡಿಸೆಂಬರ್ 02, 2023 (www.justkannada.in): ಪ್ರಸ್ತುತ ಆರ್ಥಿಕ ವರ್ಷದಲ್ಲಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪಲು ಕಠಿಣ ಪರಿಶ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬರ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತದಿಂದ ತೆರಿಗೆ ಸಂಗ್ರಹದಲ್ಲಿ ತೀವ್ರ ಕುಸಿತವಾಗುವ ಆತಂಕ ವ್ಯಕ್ತಪಡಿಸಿರುವ ಸಿಎಂ, ತೆರಿಗೆ ಸಂಗ್ರಹದ ಗುರಿಯನ್ನು ತಲುಪಲು ಪರಿಶ್ರಮವಹಿಸಬೇಕು ಎಂದು ತಿಳಿಸಿದ್ದಾರೆ.
2023-24 ರ ಸಾಲಿಗೆ ರಾಜ್ಯ ಸರ್ಕಾರ ₹1.82 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಿದೆ. ಆದರೆ ಈವರೆಗೆ ₹1.10 ಲಕ್ಷ ಕೋಟಿ ಮಾತ್ರ ಸಂಗ್ರಹಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಾಣಿಜ್ಯ ತೆರಿಗೆ ₹98,650 ಕೋಟಿ, ಅಬಕಾರಿ ₹36,000 ಕೋಟಿ, ನೋಂದಣಿ ಮತ್ತು ಮುದ್ರಾಂಕದಿಂದ ₹25,000 ಕೋಟಿ, ಸಾರಿಗೆ ₹11,500 ಕೋಟಿ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ ₹9,000 ಕೋಟಿ ತೆರಿಗೆ ಸಂಗ್ರಹದ ನಿರೀಕ್ಷೆ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.