ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡುತ್ತಿಲ್ಲ ಎಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ- ಎಂ. ಲಕ್ಷ್ಮಣ್ ಸವಾಲು

ಮೈಸೂರು,ಆಗಸ್ಟ್,1,2024 (www.justkannada.in):   ಸಿಎಂ ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡುತ್ತಿಲ್ಲ ಎಂದು ಬಿಜೆಪಿ, ಜೆಡಿಎಸ್ ನಾಯಕರು  ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸವಾಲು ಹಾಕಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ರಾಜ್ಯಪಾಲರಿಗೆ ಖಾಸಗಿ ದೂರು ನೀಡಿರುವ ವಿಚಾರ. ಈ ಸಂಬಂಧ ಜುಲೈ 26ರಂದು ದೂರು ನೀಡಲಾಗಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ದ ಕಡ್ಡಾಯವಾಗಿ ಕಾನೂನಾತ್ಮಕ ಕ್ರಮಗಳನ್ನು ಏಕೆ ಜರುಗಿಸಬಾರದು? ಎಂದು ರಾಜ್ಯಪಾಲರ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯಪಾಲರು ಬಿಜೆಪಿ ಹಾಗು ಜೆಡಿಎಸ್ ನಾಯಕರಿಂದಲೇ ಕಾನೂನು ಸಲಹೆ ಪಡೆದಿದ್ದಾರೆ . ಅಬ್ರಹಾಂ ಬರೆದಿರುವ ಪತ್ರ ಬಿಜೆಪಿ ಕಚೇರಿಯಲ್ಲಿ ಸಿದ್ದವಾಗಿದೆ. ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ಬಿಜೆಪಿ ಜೆಡಿಎಸ್ ನಾಯಕರ ಹುನ್ನಾರವಾಗಿದೆ. ಸಿದ್ದರಾಮಯ್ಯರನ್ನು ಕೆಳಗಿಳಿಸುವ ಕೆಲಸಕ್ಕೆ ಕೈಹಾಕಿದರೆ ರಾಜ್ಯದಲ್ಲಿ ಉಂಟಾಗುವ ಅಶಾಂತಿಗೆ ಬಿಜೆಪಿ, ಜೆಡಿಎಸ್ ನವರು ಕಾರಣವಾಗಲಿದ್ದಾರೆ ಎಂದು ಎಚ್ಚರಿಸಿದರು.

3.16 ಎಕರೆ ಜಮೀನು ಖರೀದಿಸಿರುವುದು ಮಲ್ಲಿಕಾರ್ಜುನ. ಇದರಲ್ಲಿ ಸಿದ್ದರಾಮಯ್ಯನವರ ಪಾತ್ರವಿಲ್ಲ. ಹಾಗಾದರೆ ಸಿದ್ದರಾಮಯ್ಯ ವಿರುದ್ಧ ಏಕೆ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರು ಅವರ ಕಚೇರಿಯನ್ನು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಯಾರ್ಯಾರೋ ಸಿಎಂ ವಿರುದ್ಧ ದೂರು ನೀಡಿದರೆ ಪ್ರಕರಣ ದಾಖಲಿಸಲು ಸಾಧ್ಯವೇ?. ಆರ್ ಅಶೋಕ್, ಅಶ್ವಥ್ ನಾರಾಯಣ್, ವಿಜಯೇಂದ್ರ, ಹೆಚ್ ಡಿ ಕುಮಾರಸ್ವಾಮಿ ಎಲ್ಲರೂ ಸೇರಿಕೊಂಡು ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಷಡ್ಯಂತ್ರ ಮಾಡುತ್ತಿಲ್ಲವೆಂದು ಹೆಚ್.  ಡಿ ಕುಮಾರಸ್ವಾಮಿ, ಬಿವೈ ವಿಜಯೇಂದ್ರ ಪ್ರಮಾಣ ಮಾಡಲಿ. ಷಡ್ಯಂತ್ರದಲ್ಲಿ ನಮ್ಮ ಕೈವಾಡವಿಲ್ಲವೆಂದು ಪ್ರಮಾಣ ಮಾಡಲಿ. ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗದ ಅತಿ ದೊಡ್ಡ ನಾಯಕರಾಗಿದ್ದಾರೆ. ಅಹಿಂದ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಿ. ಸಿಎಂ ಪರವಾಗಿ ದೊಡ್ಡ ಮಟ್ಟದ ಹೋರಾಟಕ್ಕೆ ನಾವು ಕರೆ ಕೊಡುತ್ತೇವೆ. ರಾಜ್ಯದ ಜನತೆ ಸಿಎಂ ಸಿದ್ದರಾಮಯ್ಯ ಜೊತೆ ನಿಲ್ಲಬೇಕಿದೆ ಎಂದು ಕೆಪಿಸಿಸಿ ಎಂ ಲಕ್ಷ್ಮಣ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಮೂರ್ತಿ, ಮಾಜಿ ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ಭಾಗಿಯಾಗಿದ್ದರು.

Key words:  topple, government, HDK, Vijayendra, swear,  M. Laxman