ಇತಿಹಾಸದ ಪುಟ ಸೇರುತ್ತದೆಯೇ ಎಡಕಲ್ಲು ಗುಡ್ಡ?

ವಯನಾಡು:ಮೇ-15: ಕನ್ನಡದ ಖ್ಯಾತ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದಿಂದ ಪ್ರಸಿದ್ಧಿ ಹೊಂದಿರುವ ಕೇರಳದ ವಯನಾಡು ಜಿಲ್ಲೆಯ ಎಡಕ್ಕಲ್ ಬೆಟ್ಟದ ಗುಹೆಗಳು ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದು, ಕರ್ನಾಟಕ ಹಾಗೂ ಕೇರಳ ಸರ್ಕಾರಗಳ ತಾತ್ಸಾರದಿಂದಾಗಿ ಎಡಕಲ್ಲು ಗುಹೆಗಳು ಶಾಶ್ವತವಾಗಿ ಇತಿಹಾಸದ ಪುಟ ಸೇರುವ ಆತಂಕ ಎದುರಾಗಿದೆ.

ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಪಟ್ಟಣದಿಂದ 14 ಕಿ.ಮೀ. ದೂರದಲ್ಲಿರುವ ಎಡಕ್ಕಲ್ ಬೆಟ್ಟಕ್ಕೆ ಇಂದಿಗೂ ರಾಜ್ಯದ ಸಾವಿರಾರು ಪ್ರವಾಸಿಗರು ಪ್ರತಿದಿನ ಭೇಟಿ ಕೊಡುತ್ತಾರೆ. ವಿಶೇಷವಾಗಿ ಫೆಬ್ರವರಿಯಿಂದ ಜೂನ್ ಮೊದಲ ವಾರದ ಅವಧಿಯಲ್ಲಿ ಮೈಸೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ವಯನಾಡು ಜಿಲ್ಲೆ ಪ್ರವೇಶಿಸುವವರು ಎಡಕ್ಕಲ್ ಬೆಟ್ಟಕ್ಕೆ ಕಡ್ಡಾಯವಾಗಿ ಭೇಟಿ ನೀಡುತ್ತಾರೆ. ಹೀಗಾಗಿ ಎಡಕ್ಕಲ್ ಪ್ರದೇಶಾಭಿವೃದ್ಧಿ ಮಂಡಳಿಯನ್ನೇ ಸ್ಥಾಪಿಸಿರುವ ಕೇರಳ ಸರ್ಕಾರ, ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯವನ್ನೂ ಸಂಗ್ರಹಿಸುತ್ತದೆ.

1973ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾ ಮೂಲಕ ಬೆಳಕಿಗೆ ಬಂದ ಎಡಕ್ಕಲ್ ಗುಡ್ಡದ ಮನಮೋಹಕ ಗುಹೆಗಳು ಇಂದಿಗೂ ತಮ್ಮ ಪ್ರಕೃತಿ ಸೌಂದರ್ಯ ಉಳಿಸಿಕೊಂಡಿವೆ. ಕಳೆದ ವರ್ಷ ಉಂಟಾದ ಮಳೆ ಹಾಗೂ ಪ್ರವಾಹದಿಂದ ಬೆಟ್ಟದ ಪ್ರದೇಶದಲ್ಲಿ ಭೂಕುಸಿತ, ಬಂಡೆಗಲ್ಲುಗಳು ಜಾರಿದ ಪರಿಣಾಮವಾಗಿ ಭಾರಿ ಹಾನಿಯಾಗುದೆ. 370 ಕಬ್ಬಿಣದ ಮೆಟ್ಟಿಲುಗಳನ್ನು ಏರಿ ಬೆಟ್ಟದ ತುದಿ ತಲುಪುವ ಪ್ರದೇಶವನ್ನು ಮಾತ್ರ ದುರಸ್ತಿಗೊಳಿಸಿರುವ ಕೇರಳ ಸರ್ಕಾರ, ಬೆಟ್ಟದ ಆಳದಲ್ಲಿರುವ ಗುಹೆಗಳನ್ನು ಸಂರ್ಪಸುವ ದಾರಿ ಸರಿಪಡಿಸಿಲ್ಲ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರತಿದಿನ ಕೇವಲ 1970 ಪ್ರವಾಸಿಗರಿಗೆ ಪ್ರವೇಶ ನೀಡಲು ಕೇರಳ ಸರ್ಕಾರ ತೀರ್ವನಿಸಿದೆ. ಈ ಬಗ್ಗೆ ಗುಡ್ಡದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದೆ.

ಪ್ರವೇಶ ದ್ವಾರ ಬಂದ್: ಒಂದೆಡೆ ಎಡಕ್ಕಲ್ ಗುಡ್ಡದ ಕಬ್ಬಿಣದ ಮೆಟ್ಟಿಲುಗಳನ್ನು ಸೀಮಿತ ಸಂಖ್ಯೆಯ ಪ್ರವಾಸಿಗರಿಗೆ ಮುಕ್ತವಾಗಿರಿಸಲಾಗಿದ್ದರೂ ಅಪರೂಪದ ಗುಹೆಗಳ ವೀಕ್ಷಣೆಯನ್ನು ಕಳೆದ 10 ತಿಂಗಳಿನಿಂದ ನಿಷೇಧಿಸಲಾಗಿದೆ. ಗುಡ್ಡದ ಮೆಟ್ಟಿಲುಗಳ ಪ್ರವೇಶದ ಬಳಿಯೇ ಪ್ರವೇಶ ನಿಷೇಧಿಸಿರುವ ಫಲಕಗಳನ್ನು ಕೇರಳ ಸರ್ಕಾರ ಅಳವಡಿಸಿದೆ.

ಮಾತುಕತೆಗೆ ಹಿಂದೇಟೇಕೆ?

ಕರ್ನಾಟಕ-ಕೇರಳ ನಡುವೆ ಬಂಡೀಪುರ ಅರಣ್ಯ ಮೂಲಕ ರಾತ್ರಿ ವೇಳೆ ಸಂಚಾರಕ್ಕೆ ಅನುಮತಿ ನೀಡುವಂತೆ ಸುಪ್ರಿಂಕೋರ್ಟ್ ತನಕ ಕಾನೂನು ಹೋರಾಟ ನಡೆಸಿ, ವಿಫಲವಾಗಿರುವ ಕೇರಳ ಸರ್ಕಾರ ಕರ್ನಾಟಕ ಸರ್ಕಾರವನ್ನು ಮಣಿಸಬೇಕೆಂಬ ಕಾರಣಕ್ಕೆ ಎಡಕ್ಕಲ್ ಗುಡ್ಡದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ವನ್ಯಜೀವಿಗಳ ರಕ್ಷಣೆಯ ದೃಷ್ಟಿಯಿಂದ ರಾತ್ರಿ ವೇಳೆ ಸಂಚಾರ ಒಪ್ಪದ ಕರ್ನಾಟಕ ಕೂಡ ಕೇರಳದ ಜತೆ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಎಡಕ್ಕಲ್ ಗುಡ್ಡದ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದೆ.

ಎಡಕಲ್ಲು ಗುಹೆಗಳ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದ್ದು, ಸಿಎಸ್​ಗಳ ಹಂತದಲ್ಲಿ ರ್ಚಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.

| ಸಾ.ರಾ.ಮಹೇಶ್ ಪ್ರವಾಸೋದ್ಯಮ ಸಚಿವ

ಕೃಪೆ:ವಿಜಯವಾಣಿ

tourism-edakallu-gudda-s-r-mahesh-kerala-karnataka