ಮೈಸೂರು,ಜುಲೈ,14,2021(www.justkannada.in): ಆಡಳಿತಾತ್ಮಕ ಸುಧಾರಣೆಗೆ ಎಲ್ಲರೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ( NDA)ಮಾದರಿಯಲ್ಲಿ ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡಲು ತೀರ್ಮಾನಿಸಲಾಗಿದೆ ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬುಧವಾರ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಆವರಣದಲ್ಲಿ ಏರ್ಪಡಿಸಲಾಗಿದ್ದ 35ನೇ ಪ್ರೊಬೆಷನರಿ ಪೋಲೀಸ್ ಉಪ ಅಧೀಕ್ಷಕರು ಹಾಗೂ ಅಬಕಾರಿ ಉಪ ಅಧೀಕ್ಷಕರು ಮತ್ತು 43 ಮೇ ತಂಡದ ಪ್ರೊಬೇಶನರಿ ಪೊಲೀಸ್ ಉಪ ನಿರೀಕ್ಷಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದರು.
ಪೊಲೀಸ್ ಸೇವೆಯಲ್ಲಿ ಇರುವವರಿಗೆ ವಿಶೇಷ ಹಾಗೂ ರೆಫ್ರೇಶರ್ ತರಬೇತಿಯನ್ನು ನೀಡಲಾಗುವುದು. ಬದಲಾದ ಸನ್ನಿವೇಶದಲ್ಲಿ ಪೊಲೀಸ್ ಅಧಿಕಾರಿಗಳು ಉತ್ತಮ ಆಡಳಿತಗಾರ ಆಗಬೇಕು. ಈ ಹಿನ್ನೆಲೆಯಲ್ಲಿ ತರಬೇತಿ ಸ್ವರೂಪ ಬದಲಾಗಬೇಕು. ಹೀಗಾಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ನೀಡುವ ತರಬೇತಿಯ ಮಾದರಿಯಲ್ಲಿಯೇ ರಾಜ್ಯದ ಪೊಲೀಸ್ ಅಧಿಕಾರಿಗಳಿಗೂ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.
ತರಬೇತಿ ಪಠ್ಯಕ್ರಮ ಬದಲಾವಣೆಗೆ ಸಮೀತಿ ರಚನೆ.
ಇತ್ತೀಚಿಗೆ ಅಪರಾಧ ಕೃತ್ಯಕ್ಕೆ ತಂತ್ರಜ್ಞಾನ ಮತ್ತು ತಂತ್ರಾಂಶ ಬಳಕೆ ಹೆಚ್ಚಾಗುತ್ತಿದೆ. ಸೈಬರ್ ಕ್ರೈಮ್ ಮೂಲಕ ಆರ್ಥಿಕ ಅಪರಾಧಗಳು ಹೆಚ್ಚುತ್ತಿವೆ. ಆಧುನಿಕ ತಂತ್ರಜ್ಞಾನ ದಿಂದ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಹೀಗಾಗಿ ಆಧುನಿಕ ಅಪರಾಧಕ್ಕೆ ನಮ್ಮ ಪೊಲೀಸರು ತಕ್ಕ ಉತ್ತರ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಈಗ ನೀಡಲಾಗುತ್ತಿರುವ ತರಬೇತಿ ಕಾರ್ಯಕ್ರಮ ಮತ್ತು ಪಠ್ಯಕ್ರಮದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ ಮಾಡಿದ್ದೇನೆ. ಇದಕ್ಕಾಗಿ ತರಬೇತಿ ವಿಭಾಗದ ಎಡಿಜಿಪಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಇದಕ್ಕಾಗಿ ಪರಿಣಿತರನ್ನು ಸಮಿತಿಯೊಂದಿಗೆ ಜೋಡಣೆ ಮಾಡಲಾಗುವುದು. ಮೂರು ತಿಂಗಳಲ್ಲಿ ಸಮಿತಿ ತನ್ನ ವರದಿಯನ್ನು ನೀಡಲಿದೆ. ಆ ವರದಿಯ ಶಿಫಾರಸುಗಳನ್ನು ಆಧಾರವಾಗಿಟ್ಟುಕೊಂಡು ತರಬೇತಿ ಕಾರ್ಯಕ್ರಮಗಳಿಗೆ ಆಧುನಿಕ ಸ್ಪರ್ಶ ನೀಡಲಾಗುವುದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಿಸಿದರು.
ಸಾಧನೆ ಯಶಸ್ಸಿಗಿಂತ ದೊಡ್ಡದು. ಸಾವಿನ ನಂತರವೂ ಬದುಕುವುದು ಸಾಧನೆ. ಪೊಲೀಸರಿಗೆ ವಿಶೇಷ ಅಧಿಕಾರವಿದೆ. ಅಧಿಕಾರವನ್ನು ನಿಮ್ಮ ವಿವೇಚನೆಗೆ ಸದುಪಯೋಗ ಮಾಡಿಕೊಂಡು ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡಿ ಎಂದು ಶಿಬಿರಾರ್ಥಿಗಳಿಗೆ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ನ್ಯಾಯವೇ ನನ್ನ ತಂದೆ. ಸತ್ಯವೇ ನನ್ನ ತಾಯಿ. ಕಾನೂನು ಪರಿಪಾಲಿಸುವುದೇ ನನ್ನ ಗುರಿ ಎಂದು ಕರ್ತವ್ಯ ನಿರ್ವಹಿಸಿ. ಯಾವುದೇ ರೀತಿಯ ಗೊಂದಲ ಇಲ್ಲದೆ ನ್ಯಾಯ ಪರವಾಗಿ ಕೆಲಸ ನಿರ್ವಹಿಸಿ. ಆದರೆ ಅನ್ಯಾಯಕ್ಕೊಳಗಾದವರ ಬಗ್ಗೆ ದಾಕ್ಷಿಣ್ಯ ಇರಲಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಪೊಲೀಸ್ ಇಲಾಖೆಯಲ್ಲಿ ಒಟ್ಟು 27 ಸಾವಿರ ಹುದ್ದೆಗಳು ಖಾಲಿ ಇದ್ದವು. ಕಳೆದ ಎರಡು ವರ್ಷಗಳ ಅವಧಿಯಲ್ಲಿ 14000 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಖಾಲಿ ಇರುವ ಎಲ್ಲಾ 13000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್, ತರಬೇತಿ ವಿಭಾಗದ ಪ್ರಭಾರ ಎಡಿಜಿಪಿ ಹರಿಶೇಖರನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Key words: Training -Karnataka Police Officers – National Defense Academy –Model-Home Minister -Basavaraja Bommai.