ಮೈಸೂರು,ಏಪ್ರಿಲ್,7,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಬಸ್ ಗಳ ಸಂಚಾರ ಸ್ಥಗಿತವಾಗಿದ್ದು ಸಾರಿಗೆ ನೌಕರರ ಮುಷ್ಕರ ಮೈಸೂರಿಗೂ ತಟ್ಟಿದೆ.
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮೈಸೂರಿನಲ್ಲಿ ನಿನ್ನೆ ರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತವಾಗಿದ್ದು, ಬಸ್ ಡಿಪೋಗಳಲ್ಲಿ ಬಸ್ ಗಳು ಸಾಲುಗಟ್ಟಿ ನಿಂತಿವೆ. ಬನ್ನಿಮಂಟಮದ ನಾಲ್ಕು ಡಿಪೋ, ವಿಜಯನಗರ, ಕುವೆಂಪುನಗರ, ಸಾತಗಹಳ್ಳಿ ಡಿಪೋಗಳಲ್ಲಿಯೇ ಬಸ್ ಗಳು ಸಂಚರಿಸದೇ ನಿಂತಿದ್ದು ಇದರಿಂದಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಮೈಸೂರು ನಗರ ಭಾಗದ 370, ಗ್ರಾಮಾಂತರ ಭಾಗದ 635 ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದು ಮುಷ್ಕರ ಬೆಂಬಲಿಸಿ ಒಟ್ಟು 5 ಸಾವಿರ ಸಾರಿಗೆ ಸಿಬ್ಬಂದಿ ಕೆಲಸ ಸ್ಥಗಿತ ಮಾಡಿದ್ದಾರೆ. ಬಸ್ ಗಳು ಸಂಚರಿಸದ ಹಿನ್ನೆಲೆಯಲ್ಲಿ ಮೈಸೂರು ನಗರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದೆ. ಇನ್ನು ಅಧಿಕಾರಿಗಳು ಬೇರೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಖಾಸಗಿ ಬಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ ನಗರ ಸಾರಿಗೆಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇಂದು ಪದವಿ ಪರೀಕ್ಷೆ ಸಹ ಇದ್ದು ಇದರಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
Key words: Transport employ-strike-mysore- KSRTC bus-people-problem