ಮೈಸೂರು,ಏಪ್ರಿಲ್11,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಈ ಮಧ್ಯೆ ಬಸ್ ಸಂಚಾರ ವಿಚಾರದಲ್ಲಿ ಮೈಸೂರಿನಲ್ಲಿ ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್ ಚಾಲಕ, ನಿರ್ವಾಹಕರ ನಡುವೆ ವಾಗ್ವಾದ ನಡೆದಿದೆ.
ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸಾರಿಗೆ ನೌಕರರು ಮುಷ್ಕರ ಮುಂದುವರೆದ ಹಿನ್ನಲೆ, ಕೆಎಸ್‍ಆರ್‌ಟಿಸಿ ಬಸ್ ಗಳಿಲ್ಲದೆ ಖಾಸಗಿ ಬಸ್‌ಗಳು ಸೇವೆ ಸಲ್ಲಿಸುತ್ತಿವೆ. ಆದರೆ ಇದೀಗ ಒಂದೊಂದಾಗಿ ಕೆಎಸ್ ಆರ್ ಟಿಸಿ ಬಸ್ ಗಳು ರಸ್ತೆಗಿಳಿಯುತ್ತಿದ್ದು, ಇದರಿಂದ ಆಕ್ರೋಶಗೊಂಡ ಖಾಸಗಿ ಬಸ್ ಗಳ ಚಾಲಕರು ಮತ್ತು ನಿರ್ವಾಹಕರು ಸಾರಿಗೆ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ್ದಾರೆ.
ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್ ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ ಬಂದು ಏಕಾಏಕಿ ಕೆ ಎಸ್ ಆರ್‌ಟಿಸಿ ಬಸ್ ಸಂಚರಿಸಲು ಬಿಟ್ಟರೆ ನಮ್ಮ ಗತಿಯೇನು…? ನಮ್ಮನ್ನ ಉಪಯೋಗಿಸಿಕೊಂಡು ಬಿಸಾಡುತ್ತೀರಾ…? ನಾಲ್ಕು ದಿನಗಳಿಂದ ನಾವು ಸೇವೆ ನೀಡುತ್ತಿದ್ದೇವೆ. ಈಗ ಬಂದಿರುವ ಕೆಎಸ್‍ಆರ್‍ಟಿಸಿ ಬಸ್ ಭರ್ತಿಯಾದರೆ ನಾವು ಏನ್ ಮಾಡೋದು. ನಮ್ಮ ಬಸ್ ಗಳನ್ನ ಮೊದಲು ಬಿಡಿ ಆಮೇಲೆ ನಿಮ್ಮ ಬಸ್ ಗಳು ಹೊರಡಲಿ ಎಂದು ಖಾಸಗಿ ಬಸ್ ಚಾಲಕರು, ನಿರ್ವಾಹಕರು ಒತ್ತಾಯಿಸಿದರು.
ಕೊನೆಗೆ ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್ ಚಾಲಕರು, ನಿರ್ವಾಹಕರ ನಡುವೆ ಒಪ್ಪಂದವಾಗಿ ಮೊದಲು ಎರಡು ಖಾಸಗಿ ಬಸ್ ಸಂಚಾರ ಆರಂಭಿಸಲಿ ನಂತರ ಕೆಎಸ್ ಆರ್ ಟಿಸಿ ಬಸ್ ಸಂಚಾರ ನಡೆಸಲಿ ಎಂಬ ತೀರ್ಮಾನಕ್ಕೆ ಬಂದರು. ಒಪ್ಪಂದದಂತೆ ಖಾಸಗಿ ಬಸ್ ಗಳು ಸಂಚಾರ ಆರಂಭಿಸಿವೆ.
Key words: Transport- workers -strike – Mysore-private bus-driver-outrage-transport officer