ಮೈಸೂರು,ಏಪ್ರಿಲ್,12,2021(www.justkannada.in) : ಸಾರಿಗೆ ನೌಕರರನ್ನು ಕೂಡಲೇ ಕರೆದು ಮಾತನಾಡಿ, ಸಮಸ್ಯೆ ಬಗೆಹರಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.
ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಹಲವಾರು ತೊಂದರೆಗಳಾಗುತ್ತಿದ್ದು, ಕೂಡಲೇ ಸರ್ಕಾರ ನೌಕರರನ್ನು ಕರೆದು ಮಾತನಾಡಿ ಈ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದಿದ್ದಾರೆ.
ಇನ್ನೆಷ್ಟು ದಿನ ಈ ಸಮಸ್ಯೆಯನ್ನು ಮುಂದೂವರೆಸುತ್ತೀರಿ ನಿಮ್ಮ ಹಗ್ಗಜಗ್ಗಾಟ ಸಾಕು ಉಭಯೇತರರು ಪರಸ್ಪರ ಕುಳಿತು ಮಾತನಾಡಿ ಎಂದು ಸರ್ಕಾರ ಮತ್ತು ಸಾರಿಗೆ ನೌಕರರನ್ನು ಒತ್ತಾಯಿಸಿದೆ. ಈಗಾಗಲೇ ಆಗಿರುವ ಸಮಸ್ಯೆಗಳು ಮತ್ತು ತೊಂದರೆಗಳಿಗೆ ಕೊನೆ ಮಾಡಿ ಎಂದು ವಿನಂತಿಸಿದ್ದಾರೆ.
ಗೊಬ್ಬರದ ಬೆಲೆ ಗಗನಕ್ಕೇರಿದೆ ಹಳೆ ಸಂಗ್ರಹಕ್ಕೆ ಮಾತ್ರ ಹಳೆ ದರದಲ್ಲಿ ಮಾರಿ ಎಂದು ಹೇಳಿದರೆ ಸಾಲದು. ಗೊಬ್ಬರದ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಲೇಬೇಕು ಇಲ್ಲದಿದ್ದಲ್ಲಿ ರೈತ ಸಮುದಾಯ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದವರೇ ಆದ ಕೇಂದ್ರದ ರಸಗೊಬ್ಬರ ಸಚಿವ ಸದಾನಂದಗೌಡ ಅವರು ಈ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ರೈತ ಪರ ನಿರ್ಧಾರವನ್ನು ಕೈಗೊಳ್ಳದಿದ್ದಲ್ಲಿ ಬೆಂಗಳೂರಿನಲ್ಲಿರುವ ಅವರ ಮನೆಗೆ ಮುತ್ತಿಗೆ ಹಾಕಲು ಚಿಂತನೆ ನಡೆಸುತ್ತಿದೆ ಎಂದರು.
ನಮ್ಮ ರಾಜ್ಯದ ಎಲ್ಲಾ ಸಂಸತ್ ಸದಸ್ಯರ ಮನೆ ಅಥವಾ ಕಚೇರಿ ಮುಂದೆ ಪಿಕೇಟಿಂಗ್ ನಡೆಸಲು ಕೂಡ ಚರ್ಚೆಗಳನ್ನು ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ತಿಳಿಸಿದ್ದಾರೆ.
key words : Transportation-Employees-Immediately-calling-Talk-problem-Solve-peasant leader-Badagalpur Nagendra-Demand