ಬೆಂಗಳೂರು, ನವೆಂಬರ್,5,2022 (www.justkannada.in): ಬೆಂಗಳೂರು ಮೈಸೂರು ನಡುವೆ ಪ್ರಯಾಣಿಸುವವರಿಗೆ ಇಲ್ಲೊಂದು ಒಳ್ಳೆಯ ಸುದ್ದಿ ಇದೆ. ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ತನ್ನ ಮಾತಿನಂತೆ ನಡೆದುಕೊಂಡರೆ ಈ ಹೊಸ ಹೆದ್ದಾರಿ ಬಹುತೇಕ ಈ ವರ್ಷ ಡಿಸೆಂಬರ್ 31ರ ವೇಳೆಗೆ ಸಂಪೂರ್ಣವಾಗಿ ಓಡಾಟಕ್ಕೆ ತೆರೆಯಲ್ಪಡುತ್ತದೆ.
ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು ಈ ಕುರಿತು ಮಾತನಾಡಿ, ಡಿಸೆಂಬರ್ 31ರ ವೇಳೆಗೆ ಬೆಂಗಳೂರು-ಮೈಸೂರು ಹೊಸ ಹೆದ್ದಾರಿಯ ಮದ್ದೂರು ಬೈಪಾಸ್ ಹಾಗೂ ಮೇಲ್ಸೇತುವೆ, ಮಂಡ್ಯ ಬೈಪಾಸ್ ಮತ್ತು ಶ್ರೀರಂಗಪಟ್ಟಣದ ಬಳಿಯ ಬೈಪಾಸ್ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯ ಮೊದಲ ಹಂತ ನಿಡಘಟ್ಟದವರೆಗೆ (ಬೆಂಗಳೂರು ಕಡೆಯಿಂದ ಬರುವಾಗ ಮದ್ದೂರಿಗೆ ಮುಂಚೆ) ಇದೆ. ನಿಡಘಟ್ಟದವರೆಗಿನ ರಸ್ತೆ ಕಾರ್ಯಾಚರಣೆಗೊಂಡಿದ್ದು, ಪ್ರಸ್ತುತ ಕುಂಬಳಗೋಡು ಮೇಲ್ಸೇತುವೆ, ಬಿಡದಿ ಬೈಪಾಸ್ (೬.೯ ಕಿ.ಮೀ. ಉದ್ದ) ಹಾಗೂ ರಾಮನಗರ-ಚನ್ನಪಟ್ಟಣ ಬೈಪಾಸ್ (೨೨.೩೫ ಕಿ.ಮೀ.) ರಸ್ತೆಗಳಲ್ಲಿ ವಾಹನ ಸಂಚಾರ ಆರಂಭವಾಗಿದೆ. ಆದಾಗ್ಯೂ, ಎರಡನೇ ಹಂತದ ಕಾಮಗಾರಿಗಳು ನಡೆಯುತ್ತಿರುವುದರಿಂದ (ನಿಡಘಟ್ಟದಿಂದ ಮೈಸೂರುವರೆಗೆ) ಬಹುಪಾಲು ಪ್ರಯಾಣೀಕರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
ಹೆದ್ದಾರಿಯ ಇತ್ತೀಚಿನ ಅಪ್ ಡೇಟ್ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, “ಪ್ರಸ್ತುತ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗುವ ವಾಹನ ಸವಾರರು ಮದ್ದೂರಿನವರೆಗೆ ಸುಗಮವಾಗಿ ಓಡಾಡುವಂತಿದೆ. ಮದ್ದೂರು ಬಳಿಯ ೩.೮ ಕಿ.ಮೀ. ಉದ್ದದ ಮೇಲ್ಸೇತುವೆ ಬಹುತೇಕ ಪೂರ್ಣಗೊಂಡಿದೆ. ಇದು ಕಾರ್ಯಾಚರಣೆಯನ್ನು ಆರಂಭಿಸಿದ ನಂತರ ಪ್ರಯಾಣಿಕರಿಗೆ ೨೦ ನಿಮಿಷಗಳ ಸಮಯ ಉಳಿತಾಯವಾಗುತ್ತದೆ. ಪ್ರಸ್ತುತ ಈ ಭಾಗದ ರಸ್ತೆ ಪೂರ್ಣಗೊಳ್ಳುವ ಹಂತದಲ್ಲಿದೆ. ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿಯ ಉಳಿದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ (ಇನ್ನು ೧೦ ಜಾಯಿಂಟ್ ಗಳು ಪೂರ್ಣಗೊಳ್ಳಬೇಕಿದೆ). ಇದಾದ ನಂತರ, ಲೋಡ್ ಮತ್ತು ಸುರಕ್ಷತೆ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ತಿಗೊಂಡ ನಂತರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು,” ಎಂದು ವಿವರಿಸಿದರು.
ಪ್ರಸ್ತುತ, ಹೆಚ್ಚಿನ ಮಳೆಯಿಂದಾಗಿ ಕಾಮಗಾರಿಗಳು ಸ್ವಲ್ಪ ವಿಳಂಬವಾಗುತ್ತಿದೆ. ಡಿಸೆಂಬರ್ 31ರ ವೇಳೆಗೆ ಬೆಂಗಳೂರ-ಮೈಸೂರು ನಡುವಿನ ಈ ನೂತನ ಹೆದ್ದಾರಿಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸಲು ಯೋಚಿಸಿದ್ದು, ಪ್ರಯಾಣಿಕರು ಮದ್ದೂರು ಬೈಪಾಸ್/ ಮೇಲ್ಸೇತುವೆ, ಮಂಡ್ಯ ಬೈಪಾಸ್ (೧೦ ಕಿ.ಮೀ.), ಹಾಗೂ ಶ್ರೀರಂಗಪಟ್ಟಣ (೮ ಕಿ.ಮೀ.) ರಸ್ತೆಯನ್ನು ಬಳಸಬಹುದಾಗಿದೆ. ಆದರೆ ಇಂಡವಾಲ, ಬೂದನೂರು, ಹನಕೆರೆ ಹಾಗೂ ಗೌಡಹಳ್ಳಿಗಳಲ್ಲಿ ನಾಲೆ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿದ್ದು, ಇದು ಡಿಸೆಂಬರ್ ೩೧ರವರೆಗೆ ಮುಂದುವರೆಯುವ ಸಾಧ್ಯತೆಗಳಿವೆ. ಇದರಿಂದಾಗಿ ಹಲವು ಸಣ್ಣಪುಟ್ಟ ತಿರುವುಗಳಿವೆ.
ಇಡೀ ಯೋಜನೆ ಈ ವರ್ಷ ದಸರಾ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಎನ್ ಹೆಚ್ಎಐ ತಿಳಿಸಿದ ಪ್ರಕಾರ ಮಳೆಯಿಂದಾಗಿ ಕಾಮಗಾರಿಗಳು ವಿಳಂಬಗೊಂಡವು. ಈ ಹಿನ್ನೆಲೆಯಲ್ಲಿ ಈ ಹೆದ್ದಾರಿಯ ಇಕ್ಕೆಲಗಳಲ್ಲಿನ ಕೆಲವು ಕೆರೆಗಳು ಕೋಡಿ ಹರಿದು ಹಲವು ಭಾಗಗಳು ಮಳೆನೀರಿನಲ್ಲಿ ಮುಳುಗಿದವು. ಈ ಹೆದ್ದಾರಿಯ ಮೊದಲ ಹಂತದ ಕಾಮಗಾರಿಗಳ ಒಟ್ಟು ವೆಚ್ಚ ರೂ.೩,೫೦೧ ಕೋಟಿ ಹಾಗೂ ಎರಡನೇ ಹಂತದ ಕಾಮಗಾರಿಗಳ ವೆಚ್ಚ ರೂ.೨,೯೨೦ ಕೋಟಿಗಳಾಗಿವೆ. ಈ ಯೋಜನೆಯಡಿ ನಡುವೆ ಸಿಗುವ ಪಟ್ಟಣಗಳ ಬಳಿ ಸಂಚಾರ ದಟ್ಟಣೆಯಾಗುವುದನ್ನು ತಪ್ಪಿಸಲು ಐದು ಬೈಪಾಸ್ ರಸ್ತೆಗಳಿವೆ.
ಇದರ ಜೊತೆಗೆ, ಎಂಟು ಕಿ.ಮೀ. ಉದ್ದದ ಕಾರಿಡಾರ್ ಹಾಗೂ ಒಂಬತ್ತು ಸೇತುವೆಗಳು, ೪೪ ಚಿಕ್ಕ ಸೇತುವೆಗಳು ಹಾಗೂ ನಾಲ್ಕು ರೈಲ್ವೆ ಮೇಲ್ಸೇತುವೆಗಳೀವೆ. ಎನ್ಹೆಚ್ಎಐ ಪ್ರಾಧಿಕಾರಿಗಳ ಪ್ರಕಾರ ಈ ರಸ್ತೆ ಪೂರ್ಣಗೊಂಡ ನಂತರ, ಈ ಹಿಂದೆ ಮೂರು ಗಂಟೆಗಳಿದ್ದ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಕೇವಲ ೭೫ ನಿಮಿಷಗಳಾಗಲಿವೆ. ಈ ಹೆದ್ದಾರಿಗೆ ಕುಂಬಳಗೋಡು ಹಾಗೂ ಶ್ರೀರಂಗಪಟ್ಟಣದ ಬಳಿ ಟೋಲ್ ಬೂತ್ಗಳಿರುತ್ತವೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Traveling –between- Bangalore – Mysore- now -easy.