ಬೆಂಗಳೂರು, ಅಕ್ಟೋಬರ್ 10, 2021 (www.justkannada.in): ಕರ್ನಾಟಕದ ಅತೀ ದೊಡ್ಡ ಸಾರ್ವಜನಿಕ ಹೃದ್ರೋಗ ಆಸ್ಪತ್ರೆ ಎನಿಸಿಕೊಂಡಿರುವ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ (ಪಿಎಂ-ಜೆಎವೈ) ನೀಡುತ್ತಿರುವ ಚಿಕಿತ್ಸೆಯ ಸರಾಸರಿ ವೆಚ್ಚ, ಖಾಸಗಿ-ಲಾಭಕ್ಕಾಗಿಯೇ ಇರುವಂತಹ ಹೃದ್ರೋಗ ಆಸ್ಪತ್ರೆಗಳ ಹೋಲಿಕೆಯಲ್ಲಿ ಮೂರು ಪಟ್ಟು ಹೆಚ್ಚು ಎಂಬ ಅಂಶವನ್ನು ಪ್ರಾಕ್ಸಿಮಾದ ಸಾರ್ವಜನಿಕ-ಖಾಸಗಿ ಉಪಕ್ರಮ ‘ಜೀವನ ರಕ್ಷಾ ಯೋಜನೆ’ಯ ವಿಶ್ಲೇಷಣೆ ಹೊರಹಾಕಿದೆ.
ಪಿಎಂ-ಜೆಎವೈ ಯೋಜನೆಗೆ ೨೦೧೮ನೇ ಇಸವಿಯಲ್ಲಿ ಚಾಲನೆ ನೀಡಲಾಯಿತು. ಅಂದಿನಿಂದ ಬೆಂಗಳೂರಿನಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ (ಎಸ್ಜೆಐಸಿಆರ್)ಯಲ್ಲಿ ಈವರಗೆ ಈ ಯೋಜನೆಯಡಿ ಒಟ್ಟು ೧೫,೨೨೪ ಫಲಾನುಭವಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ. “ಈ ಒಟ್ಟು ಚಿಕಿತ್ಸಾ ವೆಚ್ಚ ರೂ.೧೨೭ ಕೋಟಿಗಳಾಗಿದೆ. ಅಂದರೆ ಪಿಎಂ-ಜೆಎವೈ ಯೋಜನೆಯಡಿ ಇಲ್ಲಿ ಒದಗಿಸಲಾಗಿರುವ ಪ್ರತಿ ವ್ಯಕ್ತಿಗೆ ಒದಗಿಸಿರುವ ಚಿಕಿತ್ಸೆಯ ವೆಚ್ಚ ಸರಾಸರಿ ರೂ.೮೩,೪೨೧. ವಿಚಿತ್ರವೆಂದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಯ ಸರಾಸರಿ ವೆಚ್ಚ ರೂ.೨೮,೫೮೮ ಅಗುತ್ತದಂತೆ. ಅಂದರೆ ಜಯದೇವ ಆಸ್ಪತ್ರೆಯಲ್ಲಿ ಪಿಎಂ-ಜೆಎವೈ ಯೋಜನೆಯಡಿ ನೀಡುತ್ತಿರುವ ಚಿಕಿತ್ಸಾ ವೆಚ್ಚ ಮೂರು ಪಟ್ಟು ದುಬಾರಿ. ಈ ಅಂಶವನ್ನು ಪ್ರಾಜೆಕ್ಟ್ ಜೀವನ್ ರಕ್ಷಾದ ಸಂಯೋಜಕ ಮೈಸೂರು ಸಂಜೀವ್ ಎನ್ನುವವರು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ (National Health Authority) ಸಲ್ಲಿಸಿದ್ದಂತಹ ಆರ್ಟಿಐ ಅರ್ಜಿಯೊಂದರಲ್ಲಿ ಲಭಿಸಿರುವ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ.
ಈ ವಿಶ್ಲೇಷಣೆಯಡಿ ಈ ಯೋಜನೆಯಡಿ ಜಯದೇವ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆಯ ವೆಚ್ಚಗಳನ್ನು, ಇದೇ ಸಮಯದಲ್ಲಿ ೧೧,೮೯೩ ರೋಗಿಗಳಿಗೆ ಇದೇ ರೀತಿಯ ಚಿಕಿತ್ಸೆಯನ್ನು ಒದಗಿಸಿರುವ ಅಹ್ಮದಾಬಾದ್ನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಜೊತೆಗೆ ಹೋಲಿಕೆ ಮಾಡಲಾಗಿದೆ. ಅಲ್ಲಿ ಒಟ್ಟು ೧೧,೮೯೩ ರೋಗಿಗಳಿಗೆ ನೀಡಿದÀ ಒಟ್ಟು ಚಿಕಿತ್ಸಾ ವೆಚ್ಚ ರೂ. ೩೪ ಕೋಟಿಗಳು. ಅಂದರೆ ಸರಾಸರಿ ಪ್ರತಿ ಫಲಾನುಭವಿಯ ಚಿಕಿತ್ಸಾ ವೆಚ್ಚ ರೂ.೨೮,೫೮೮ ಎನ್ನಲಾಗಿದೆ.
ಆದರೆ, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ಈ ದತ್ತಾಂಶವನ್ನು ದಾರಿತಪ್ಪಿಸುವಂತಿದೆ ಎಂದಿದ್ದಾರೆ. ಸರ್ಕಾರಿ ಅಥವಾ ಖಾಸಗಿ ಯಾವುದೇ ಆಸ್ಪತ್ರೆಯಾದರೂ ಸಹ ಸರ್ಕಾರಿ ಯೋಜನೆಯಡಿ ನಿಗಧಿಪಡಿಸಿರುವುದಕ್ಕಿಂತ ಒಂದೇ ಒಂದು ರೂಪಾಯಿಯೂ ಸಹ ಹೆಚ್ಚಾಗಿ ತೆಗೆದುಕೊಳ್ಳುವಂತಿಲ್ಲ. ಹಾಗಾಗಿ, ಒಂದೇ ಸರ್ಕಾರಿ ಯೋಜನೆಯಡಿ ನೀಡುವ ಚಿಕಿತ್ಸಾ ವೆಚ್ಚ ಎರಡು ಆಸ್ಪತ್ರೆಗಳಲ್ಲಿ ಎರಡು ರೀತಿಯಲ್ಲಿ ಇರುವುದು ಸಾಧ್ಯವಿಲ್ಲ ಎನ್ನುತ್ತಾರೆ. “ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ೧೭,೭೯೫ ರೋಗಿಗಳಿಗೆ ಹೃದಯದ ಶಸ್ತçಚಿಕಿತ್ಸೆ, ಆಂಜಿಯೋಪ್ಲಾಸ್ಟಿ ಹಾಗೂ ಸ್ಟೆಂಟ್ ಮತ್ತು ಪೇಸ್ಮೇಕರ್ ಅಳವಡಿಕೆ ಚಿಕಿತ್ಸೆಗಳನ್ನು ಒದಗಿಸಲಾಗಿದೆ. ಈ ಒಟ್ಟು ಚಿಕಿತ್ಸೆಗಳನ್ನು ರೂ.೧೨೭ ಕೋಟಿಗಳಿಂದ ಭಾಗಿಸಿದರೆ ಸರಾಸರಿ ಪ್ರತಿ ರೋಗಿಗೆ ನೀಡಿರುವ ಚಿಕಿತ್ಸಾ ವೆಚ್ಚ ಅಂದಾಜು ರೂ.೭೪,೦೦೦ದಷ್ಟು ಬರುತ್ತದೆ,” ಎಂದು ವಿವರಿಸಿದರು.
ಡಾ. ಮಂಜುನಾಥ್ ಅವರ ಮಾತುಗಳನ್ನು ಬೆಂಬಲಿಸಿದ ನಾರಾಯಣ ಹೆಲ್ತ್ನ ಸ್ಥಾಪಕರು ಹಾಗೂ ಅಧ್ಯಕ್ಷರೂ ಆಗಿರುವಂತಹ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಅವರು, “ನಮ್ಮ ದತ್ತಾಂಶಗಳ ಪ್ರಕಾರ ಈ ವರ್ಷ ಪ್ರತಿ ರೋಗಿಯ ಹೃದ್ರೋಗ ಶಸ್ತçಚಿಕಿತ್ಸೆಗೆ ರೂ.೧.೦೬ ಲಕ್ಷ ವೆಚ್ಚವಾಗಿದ್ದು, ಹೃದ್ರೋಗದ ಚಿಕಿತ್ಸೆಗೆ ರೂ.೭೪,೦೦೦ ವೆಚ್ಚವಾಗಿದೆ. ಪ್ರತಿ ಫಲಾನುಭವಿಯ ಸರಸಾರಿ ಚಿಕಿತ್ಸಾ ವೆಚ್ಚ ಎರಡು ಆಸ್ಪತ್ರೆಗಳಲ್ಲಿ ಬೇರೆ ಬೇರೆ ಆಗಿರಲು ಸಾಧ್ಯವಿಲ್ಲ. ಪಿಎಂ-ಜೆಎವೈ ಯೋಜನೆಯಡಿ ಪ್ರತಿ ಫಲಾನುಭವಿಗೆ ನೀಡುವ ಸರಾಸರಿ ಚಿಕಿತ್ಸಾ ವೆಚ್ಚ ರೂ.೨೮,೫೮೮ ದಷ್ಟು ಕಡಿಮೆ ಆಗಿರಲು ಸಾಧ್ಯವಿಲ್ಲ. ಅವರು ಒದಗಿಸಿರುವ ದತ್ತಾಂಶದಲ್ಲಿ ತಪ್ಪಾಗಿರಬಹುದು,” ಎಂದರು.
“ಸಾಮಾನ್ಯವಾಗಿ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗೆ ನಮ್ಮ ಆಸ್ಪತ್ರೆಯಲ್ಲಿ ನೀಡುವ ಸಿಂಗಲ್ ವೆಸೆಲ್ ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ಸ್ಟೆಂಟ್ ಅಳವಡಿಕೆಯೂ ಸೇರಿದಂತೆ ತಗಲುವ ಕಾರ್ಯಾಚರಣಾ ವೆಚ್ಚ ರೂ.೨.೩೫ ಲಕ್ಷ. ಆದರೆ ಪಿಎಂ-ಜೆಎವೈ ನಮಗೆ ಒದಗಿಸುವ ಹಣ ಕೇವಲ ರೂ.೬೦,೦೦೦,” ಎಂದು ವಿವರಿಸಿದರು.
ನಮ್ಮ ಆಸ್ಪತ್ರೆಯಲ್ಲಿ ಡಬಲ್ ವಾಲ್ವ್ ರೀಪ್ಲೇಸ್ಮೆಂಟ್ ಚಿಕಿತ್ಸೆಗೆ ರೂ.೨.೨೫ ಲಕ್ಷ ವೆಚ್ಚವಾದರೂ ಸಹ ಸರ್ಕಾರದ ಯೋಜನೆಯಡಿ ನಮಗೆ ಒದಗಿಸುವ ಹಣ ಕೇವಲ ರೂ.೧.೫೦ ಲಕ್ಷ ಎಂದು ಡಾ. ಮಂಜುನಾಥ್ ಅವರು ತಿಳಿಸಿದರು.
“ಆ ಪ್ರಕಾರವಾಗಿ ನಮಗೆ ಪ್ರತಿ ಚಿಕಿತ್ಸೆಗೆ ರೂ.೫೦,೦೦೦ ನಷ್ಟ ಉಂಟಾಗುತ್ತಿದೆ. ಇದರಿಂದಾಗಿ ಪಿಎಂಜೆಎವೈ/ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗಳಡಿ ನಾವು ಒದಗಿಸುವ ಚಿಕಿತ್ಸೆಯಿಂದಾಗಿ ವಾರ್ಷಿಕ ರೂ.೨.೫ ಕೋಟಿ ನಷ್ಟವುಂಟಾಗುತ್ತಿದೆ. ಪ್ರತಿ ವಾಲ್ವ್ನ ಬೆಲೆಯನ್ನು ಸರ್ಕಾರ ರೂ.೩೫,೦೦೦ಕ್ಕೆ ನಿಗಧಿಪಡಿಸಿದೆ. ಒಂದು ವೇಳೆ ಸರ್ಕಾರಿ ಯೋಜನೆಯಡಿ ದಾಖಲಾಗುವ ರೋಗಿಗೆ ಉತ್ತಮ ವಾಲ್ವ್ ಅಳವಡಿಕೆ ಅಗತ್ಯವಾದರೆ ನಾವು ರೂ.೭೦,೦೦೦ ಬೆಲೆಯ ವಾಲ್ವ್ ಅನ್ನೇ ಅಳವಡಿಸಿ, ಬಾಕಿ ವೆಚ್ಚವನ್ನು ಮನ್ನಾ ಮಾಡುತ್ತೇವೆ,” ಎಂದು ಡಾ. ಮಂಜುನಾಥ್ ವಿವರಿಸುತ್ತಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
The average cost of treatment under the Pradhan Mantri Jan Arogya Yojana (PM-JAY) at Jayadeva hospital, the largest public heart hospital in Karnataka, is three times higher than that at a private for-profit heart hospital, according to an analysis by Project Jeevan Raksha, a public-private initiative of Proxima.