ಮೈಸೂರು, ಏಪ್ರಿಲ್ 07, 2023 (www.justkannada.in): ಮೈಸೂರಿನ ಹಂಚ್ಯಾ – ಸಾತಗಳ್ಳಿ ಪ್ರದೇಶದಲ್ಲಿ ವಿಟಿಯು ಪ್ರಾದೇಶಿಕ ಕೇಂದ್ರದ ಸಮೀಪದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೂರಾರು ಮರಗಳನ್ನು ಕಡಿಯಲು ಮುಂದಾಗಿದ್ದು, ಪರಿಸರ ಬಳಗ ಇದರ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಿದೆ.
ನೂರಾರು ಮರಗಳ ಬುಡಮೇಲು ಮಾಡುತ್ತಿರುವ ವಿಷಯ ಪರಿಸರ ಬಳಗದ ಗಮನಕ್ಕೆ ಬಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯಿಂದ ಆಗುತ್ತಿರುವ ಭೀಕರ ಪರಿಣಾಮಗಳನ್ನು ನಾವೆಲ್ಲ ಈಗಾಗಲೇ ಅನುಭವಿಸುತ್ತಿದ್ದೇವೆ. ಈ ವರ್ಷ ಫೆಬ್ರವರಿ ತಿಂಗಳಲ್ಲಿ ಉಷ್ಣತೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು ನಮಗೆಲ್ಲ ಗೊತ್ತಿದೆ. ಹಲವು ಜೀವನದಿಗಳ ಉಗಮ ಸ್ಥಾನವಾದ ಕೊಡಗಿನಲ್ಲಿ ಹಲವು ನದಿಗಳು ಏಪ್ರಿಲ್ ತಿಂಗಳಲ್ಲೇ ಬತ್ತಿ ಹೋಗುತ್ತಿದ್ದು ಹಲವು ಹಳ್ಳಿಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಇದೇ ರೀತಿ ಹವಾಮಾನ ಬದಲಾವಣೆಯಿಂದ ಪ್ರತಿದಿನ ಜಗತ್ತಿನ ಒಂದಲ್ಲ ಒಂದು ಕಡೆ ಪ್ರಾಕೃತಿಕ ವಿಕೋಪಗಳು ಘಟಿಸುತ್ತಿವೆ. ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದ್ದು ಮುಂದಿನ ದಿನಗಳಲ್ಲಿ ಊಹಿಸಲೂ ಸಾಧ್ಯವಾಗದ ಪ್ರಾಕೃತಿಕ ವಿಕೋಪಗಳು ಜರುಗುವ ಅಪಾಯ ಇದೆ. ಈಗಿನ ಪರಿಸ್ಥಿತಿಯಲ್ಲಿ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸುವ ಕೆಲಸ ಮಾಡಬೇಕಾಗಿರುವುದು ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ಜವಾಬ್ದಾರಿ ಆಗಿದೆ. ಹೀಗಿರುವಾಗ ಮರಗಳನ್ನು ಕಡಿಯುವುದು ಅತ್ಯಂತ ಕ್ರೂರ ಮತ್ತು ಬೇಜವಾಬ್ದಾರಿ ಕೆಲಸ ಎಂದು ಪರಿಸರ ಬಳಗ ಆಕ್ರೋಶ ವ್ಯಕ್ತಪಡಿಸಿದೆ.
ಈಗಾಗಲೇ ನೂರಾರು ಮರಗಳನ್ನು ಕಡಿಯಲಾಗಿದ್ದು, ಇದಕ್ಕೆ ಕಾರಣರಾದವರ ಮೇಲೆ ಅರಣ್ಯ ಇಲಾಖೆ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪರಿಸರ ಬಳಗದ ಪರಶುರಾಮೇಗೌಡ ಒತ್ತಾಯಿಸಿದ್ದಾರೆ.
key words: trees -felled -Mysore-Hanchya-Satagalli -area- Environmental groups-demand- action