ಬೆಂಗಳೂರು, ಏಪ್ರಿಲ್,6,2021(www.justkannada.in): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೆರಿಕಾದ ಟ್ರೈಟನ್ ಎಲೆಕ್ಟ್ರಿಕ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಿಮಾಂಶು ಪಟೇಲ್ ಅವರೊಂದಿಗೆ ರಾಜ್ಯದಲ್ಲಿ ಹೂಡಿಕೆಯ ಅವಕಾಶಗಳ ಬಗ್ಗೆ ವರ್ಚುಯಲ್ ಸಭೆ ನಡೆಸಿದರು.
ಟ್ರೈಟನ್ ಎಲೆಕ್ಟ್ರಿಕ್ ವಾಹನಗಳ ಸಂಸ್ಥೆಯು ರಾಜ್ಯದಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಎಲ್ಲಾ ಸಹಕಾರ ಮತ್ತು ಬೆಂಬಲವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದರು. ರಾಮನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಲಸ್ಟರ್ ಅನ್ನು 500 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಕ್ಲಸ್ಟರ್ ಸೂಕ್ತ ವಾತಾವರಣವನ್ನು ಕಲ್ಪಿಸಲಿದೆ.
ದೇಶದಲ್ಲಿ ಮೊತ್ತಮೊದಲ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಪ್ರಸ್ತುತ ನೀತಿಯನ್ನು ಹೆಚ್ಚು ಹೂಡಿಕೆಸ್ನೇಹಿಯನ್ನಾಗಿಸಲು ಪರಿಷ್ಕರಿಸಲಾಗುತ್ತಿದೆ ಎಂದರು.
ಕೋವಿಡ್-19 ಸಾಂಕ್ರಾಮಿಕ ಜಗತ್ತಿನಾದ್ಯಂತ ಆರ್ಥಿಕತೆಗೆ ಪೆಟ್ಟು ನೀಡಿದ್ದರೂ, ಕರ್ನಾಟಕ ಸರ್ಕಾರ ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಿದೆ. ನೂತನ ಕೈಗಾರಿಕಾ ನೀತಿಯು ಕರ್ನಾಟಕವನ್ನು ಜಾಗತಿಕ ಸರಬರಾಜು ಸರಪಳಿಯ ಬಹುಮುಖ್ಯ ಭಾಗವಾಗಿಸಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಮಾತನಾಡಿ, ನೂತನ ಕೈಗಾರಿಕಾ ನೀತಿಯು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆಗೆ ಹೆಚ್ಚು ಒತ್ತು ನೀಡಿದ್ದು, ದೇಶದ ನಾವೀನ್ಯತಾ ಸೂಚ್ಯಂಕದಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ ಎಂದರು. ವಿದ್ಯುತ್ ವಾಹನಗಳು ರಾಜ್ಯ ಸರ್ಕಾರದ ಆಸಕ್ತಿಯ ವಲಯಗಳಲ್ಲಿ ಒಂದು ಎಂದರು.
ಆಯುಕ್ತರಾದ ಗುಂಜನ್ ಕೃಷ್ಣಾ ಮಾತನಾಡಿ, ನೂತನ ಕೈಗಾರಿಕಾ ನೀತಿಯು ಕೈಗಾರಿಕೆಗಳಿಗೆ ಭೂಮಿ ಖರೀದಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಕಾರ್ಮಿಕ ಅನುಪಾಲನೆಯನ್ನು ಸುಲಭವಾಗಿಸಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಂಡವಾಳ ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ಕರ್ನಾಟಕ ಒದಗಿಸುತ್ತಿದೆ ಎಂದು ವಿವರಿಸಿದರು.
ಹಿಮಾಂಶು ಪಟೇಲ್ ಅವರು ಮಾತನಾಡಿ, ಕರ್ನಾಟಕದಲ್ಲಿ ಟ್ರೈಟನ್ ಸಂಸ್ಥೆ ಹೂಡಿಕೆ ಮಾಡಲು ಉತ್ಸುಕವಾಗಿದ್ದು, ಇದರ ಸಂಭಾವ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರಲ್ಲದೆ ಶೀಘ್ರದಲ್ಲಿಯೇ ಮತ್ತೊಂದು ಸುತ್ತಿನ ಚರ್ಚೆಗೆ ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಸಚಿವ ಡಾ|| ಕೆ.ಸುಧಾಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಪಿ.ಸೆಲ್ವಕುಮಾರ್, ಉಪಸ್ಥಿತರಿದ್ದರು.
ENGLISH SUMMARY…
Triton Electric Vehicles to invest in Karnataka: CM BSY
Bengaluru, Apr. 6, 2021 (www.justkannada.in): Chief Minister B.S. Yedyurappa held a virtual meeting with the Chief Executive Officer Himanshu Patel of the America-based Triton Electric Vehicles regarding investing in the state.
Yedyurappa assured to provide all the required cooperation and support from the government to invest in the state. An electric vehicle manufacturing cluster is being constructed in an area of more than 500 acres in Ramanagara District, which will provide suitable infrastructure.
Karnataka is the first state in the country to introduce the electric vehicle policy. The Chief Minister also informed that the policy will be further reconsidered to make it more investment-friendly.
Himanshu Patel informed that the company would be happy to invest in Karnataka and said that the possibilities would be checked and another round of discussion would be held soon.
Health Minister Dr. K. Sudhakar, Chief Minister’s Secretary P. Selvakumar, and others were present.
Keywords: Chief Minister B.S. Yedyurappa/ Triton Electric Vehicles/ Himanshu Patel/ virtual meeting/ investment in state/ support
Key words: Triton- Electric Vehicle- Company –support- investment – state-CM BS Yeddyurappa