ಮೈಸೂರು,ಆಗಸ್ಟ್, 8,2024 (www.justkannada.in): ಪ್ರಾಮಾಣಿಕ, ಕಳಂಕ ರಹಿತ, ದಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳಿನ ಆರೋಪ ಮಾಡಿ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಪಕ್ಷದ ವಿರುದ್ಧ ಹಾಗೂ ಸಿದ್ದರಾಮಯ್ಯ ಅವರಿಗೆ ನೈತಿಕ ಬಲ ತುಂಬಲು ಇದೇ ಆಗಸ್ಟ್ 9 ರಂದು ಮೈಸೂರಿನ ಮಹಾರಾಜ ಮೈದಾನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಮಲ್ಲೇಶ್ ತಿಳಿಸಿದರು.
ಈ ಕುರಿತು ಮಾತನಾಡಿದ ಕೆ.ವಿ ಮಲ್ಲೇಶ್, ಪೂರ್ಣ ಬಹುಮತ ಹೊಂದಿರುವ, ಜನಸ್ನೇಹಿತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಡ್ಡಿಪಡಿಸುತ್ತಿರುವ ವಿಪಕ್ಷಗಳಿಗೆ ಬುದ್ಧಿ ಕಲಿಸುವ ಸಂದರ್ಭ ಎಲ್ಲ ನಾಗರಿಕರ ಮುಂದಿದೆ. ಬಿಜೆಪಿ-ಜೆಡಿಎಸ್ ಸುಳ್ಳಿನ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಸತ್ಯ, ನೈತಿಕತೆಯ ಹೋರಾಟ ನಡೆಯುತ್ತಿದೆ. ಜನರಿಗೆ ಅನುಕೂಲವಾಗುವಂತಹ ಗ್ಯಾರಂಟಿ ಯೋಜನೆಗಳನ್ನು ಮಾನ್ಯ ಸಿದ್ದರಾಮಯ್ಯನವರು ತಂದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ ಒಂದು ಕಪ್ಪುಚುಕ್ಕೆಯೂ ಇರದಂತಹ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರಿಗೆ ಬಿಜೆಪಿ-ಜೆಡಿಎಸ್ ಹೇಗಾದರೂ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಹವಣಿಸುತ್ತಿದೆ. ಹಲವು ಷಡ್ಯಂತ್ರಗಳನ್ನು ಮಾಡುತ್ತಿರುವುದು ರಾಜ್ಯದ ಜನರ ಅರಿವಿಗೆ ಬರುತ್ತಿದೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನೀಡಿದ ಜನಪರ, ಜೀವಪರ , ಸರ್ವಾಂಗೀಣ ಅಭಿವೃದ್ಧಿ ಪರ ಕಾರ್ಯಕ್ರಮಗಳು ಹಾಗೂ ಜನ ಸಮುದಾಯದಲ್ಲಿ ಬಿತ್ತಿದ ಸಮತೆ ಮತ್ತು ಸಮಾನತೆಯ ಆಶಯಗಳು ಬಿಜೆಪಿಯ ಒಡೆದು ಆಳುವ ರಾಜಕಾರಣಕ್ಕೆ ರಾಜ್ಯ ಮಾತ್ರವಲ್ಲ ದೇಶದಲ್ಲೆ ದೊಡ್ಡ ಮಟ್ಟದ ಪ್ರತಿರೋಧ ಒಡ್ಡಿವೆ. ಸಿದ್ದರಾಮಯ್ಯ ಅವರನ್ನು ತಾತ್ವಿಕವಾಗಿ, ಸೈದ್ದಾಂತಿಕವಾಗಿ ಮತ್ತು ರಾಜಕೀಯವಾಗಿ ಎದುರಿಸಲಾಗದು ಎನ್ನುವುದನ್ನು ಅರಿತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಕಾಲಾಳುಗಳ ಮೂಲಕ ಸಿದ್ದರಾಮಯ್ಯ ಅವರ ಮೇಲೆ ಭ್ರಷ್ಟಾಚಾರದ ಕೆಸರು ಎರಚಿ, ಅವರ ಸೈದ್ಧಾಂತಿಕ ರಾಜಕೀಯ ಶಕ್ತಿಯನ್ನು ಮಣಿಸುವ ಹುನ್ನಾರ ಮಾಡುತ್ತಿದೆ ಎಂದು ಕೆ.ವಿ ಮಲ್ಲೇಶ್ ಕಿಡಿಕಾರಿದರು.
ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಪಾದಯಾತ್ರೆ ನಡೆಸುತ್ತಿರುವ ನಾಯಕರನ್ನು ನಾನು ಕೇಳಬಯಸುತ್ತೇನೆ ‘ರಾಜಕೀಯದಲ್ಲಿ ನೀವೆಲ್ಲ ಸತ್ಯ ಹರಿಶ್ಚಂದ್ರರಾ?’. ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ ನಿಮಗೆ? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನೀವು ಬೇರೆಯವರ ತಟ್ಟೆಯ ನೊಣದ ವಿಷಯ ಮಾತನಾಡುತ್ತಿದ್ದೀರಿ. ಇನ್ನಾದರೂ ರಾಜಕೀಯ ಲಜ್ಜೆಗೇಡಿತನಗಳನ್ನು ಬಿಟ್ಟು ಮುತ್ಸದ್ದಿತನವನ್ನು ತೋರಿಸಿ. ಬರಿದೆ ರಾಜಕೀಯಕ್ಕಾಗಿ ಮೈಸೂರಿಗೆ ಪಾದಯಾತ್ರೆ ನಡೆಸುವುದನ್ನು ನಿಲ್ಲಿಸಿ, ಕರ್ನಾಟಕಕ್ಕೆ ಸಲ್ಲಬೇಕಾದ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಿಲ್ಲಿಗೆ ಯಾತ್ರೆ ಹೋಗಿ. ಅಲ್ಲಿ ನಿಮ್ಮ ಶಕ್ತಿಯನ್ನು ತೋರಿಸಿ ಎಂದು ಕೆ.ವಿ ಮಲ್ಲೇಶ್ ವಾಗ್ದಾಳಿ ನಡೆಸಿದ್ದಾರೆ.
Key words: Truth, moral fight, Congress, K.V. Mallesh