ಬೆಂಗಳೂರು, ಮಾರ್ಚ್ 24, 2020 (www.justkannada.in): ಹಬ್ಬ ಇದೆ. ಜನ ಹಬ್ಬ ಮಾಡಬೇಕಿದೆ. ವ್ಯಾಪಾರ ಮಾಡಲಿ.. ಅದಕ್ಕಾಗಿ ಲಾಠಿ ಪ್ರಹಾರ ಬೇಡ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಕೊರೋನಾ ತಡೆಯುವಲ್ಲಿ ಸರಕಾರ ವಿಫಲವಾಗಿದೆ. ಆರೋಗ್ಯ ಸಚಿವರಿಗೂ ವೈದ್ಯಕೀಯ ಶಿಕ್ಷಣ ಸಚಿವರ ಮಧ್ಯೆ ಸಮನ್ವಯತೆ ಇಲ್ಲ. ಮುಂದಾಗುವುದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆ. ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿದೆ. ಬಹುಮತ ಇಲ್ಲದ ಅನೈತಿಕ ಸರ್ಕಾರ ಎಂದು ಟೀಕಿಸಿದ್ದಾರೆ.
ರಾಜ್ಯದ ಜನ ಇವರನ್ನು ನಂಬಿ 25 ಸಂಸದರನ್ನು ಗೆಲ್ಲಿಸಿಕೊಟ್ಟರು. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸಂಸದರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ರಾಜ್ಯ ಹಾಳು ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದಾರೆ. ಮೂರು ವರ್ಷದಲ್ಲಿ ಕರ್ನಾಟಕವು 20 ವರ್ಷ ಹಿಂದಕ್ಕೆ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
13 ಬಜೆಟ್ ಮಾಡಿದಾಗಲೂ ಪೂರ್ಣ ಲೇಖಾನುದಾನ ಪಡೆದಿಲ್ಲ. ಜೂನ್ ಅಥವಾ ಜುಲೈನಲ್ಲಿ ಚರ್ಚಿಸೋಣ. ಜನರ ತೆರಿಗೆ ಹಣ ಸದ್ಬಳಕೆ ಆಗುತ್ತಿದೆಯೋ ಇಲ್ಲವೋ ಚರ್ಚೆ ಆಗಬೇಕು ಎಂದೆವು. ಆದರೆ, ಇದಕ್ಕೊಪ್ಪದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಗೆ ಅನುಮೋದನೆ ಪಡೆಯಬೇಕು ಎಂದು ಮೊಂಡುತನ ಮಾಡುತ್ತಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸದನ ಮುಂದೂಡಲೇಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂದು ಹೇಳಿದ್ದಾರೆ
ಮಾರಕ ಕಾಯಿಲೆ, ಜನರ ಸಾವು-ನೋವಿನ ಪ್ರಶ್ನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಆವಶ್ಯಕ. ನಿನ್ನೆಯೇ ಧನವಿನಿಯೋಗ ವಿಧೇಯಕ ಅನುಮೋದನೆ ಕೊಡಲು ಸಿದ್ಧ. ಪೂರಕ ಅಂದಾಜುಗಳಿಗೂ ಅನುಮೋದನೆ ಪಡೆದುಕೊಳ್ಳಿ. ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಅನಿರ್ದಿಷ್ಟ ಅವಧಿಗೆ ಮುಂದೂಡಿ ಎಂದಿದ್ದೆವು. ಧನವಿನಯೋಗ ವಿಧೇಯಕ ಬಿಟ್ಟು ಬೇರಾವ ವಿಧೆಯಕಗಳನ್ನೂ ತರಬೇಡಿ. ಪ್ರಮುಖ ವಿಧೇಯಕಗಳು ಚರ್ಚೆ ಆಗದೆ ಅನುಮೋದಿಸುವುದು ಸರಿಯಲ್ಲ. ಆದರೆ, ಅಷ್ಟು ಸಮಯಾವಕಾಶ ಇಲ್ಲ. ಹೀಗಾಗಿ ಬೇಡ ಎಂದಿದ್ದೆವು ಎಂದು ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಡಾ.ಜಿ. ಪರಮೇಶ್ವರ್, ಅಜಯ್ ಸಿಂಗ್, ರಾಮಲಿಂಗಾರೆಡ್ಡಿ, ರಮೇಶಕುಮಾರ್ ಇತರರು ಇದ್ದರು.