ತುಮಕೂರು,ಅಕ್ಟೋಬರ್,8,2020(www.justkannada.in): ಇತ್ತೀಚೆಗೆ ಮೃತಪಟ್ಟ ಕುಣಿಗಲ್ ತಾಲ್ಲೂಕಿನ ಫಯಾಜ್ ಕುಟುಂಬಕ್ಕೆ ರಾಜ್ಯ ಮತ್ತು ಜಿಲ್ಲಾ ಸಂಘ ಹಾಗೂ ತಾಲ್ಲೂಕು ಪತ್ರಕರ್ತರ ಸಂಘ ಸೇರಿ ಸಂಗ್ರಹಿಸಿದ ದೇಣಿಗೆ ಹಣವನ್ನು ಹಸ್ತಾಂತರಿಸಲಾಯಿತು.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಪತ್ರಕರ್ತ ಪೈಯಾಜ್ ಉಲ್ಲಾ ಇತ್ತೀಚೆಗೆ ಮೃತಪಟ್ಟಿದ್ದರು. ಹೀಗಾಗಿ ಅವರ ಕುಟುಂಬಕ್ಕೆ ಧನಸಹಾಯ ಮಾಡಬೇಕೆಂದು ಅಲ್ಲಿನ ಪತ್ರಕರ್ತರು ಕೋರಿದ್ದರು. ರಾಜ್ಯ ಸಂಘದಿಂದ ಕೊಡುವ ಪರಿಹಾರ ಸಾಕಾಗುವುದಿಲ್ಲ. ಒಟ್ಟಿಗೆ ಸೇರಿ ಪ್ರಯತ್ನ ಮಾಡೋಣ ಎಂದಿದ್ದಕ್ಕೆ ಎಲ್ಲಾ ಪತ್ರಕರ್ತರು ಹೃದಯ ಪೂರ್ವಕವಾಗಿ ಕೈಜೋಡಿಸಿದರು.
ಮನಸಿದ್ದರೆ ಮಾರ್ಗ ಎನ್ನುವುದು ತಿಪಟೂರು ತಾಲೂಕಿನ ಪತ್ರಕರ್ತ ಪ್ರಜಾವಾಣಿಯ ಹಳ್ಳಿ ಸುರೇಶ್ ಅವರ ಕುಟುಂಬಕ್ಕೆ ಕೆಯುಡಬ್ಲ್ಯೂಜೆ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ 1.23ಲಕ್ಷ ಸಂಗ್ರಹಿಸಿ ಕೊಟ್ಟಿದ್ದ ಘಟನೆ ಸಾಕ್ಷಿಯಾಗಿತ್ತು. ಹೀಗಾಗಿ ಅದೇ ಪ್ರಯತ್ನ ಮುಂದುವರೆಯಿತು.
ಹಳ್ಳಿ ಸುರೇಶ್ ಕುಟುಂಬಕ್ಕೆ ಸಹಾಯ ಮಾಡಿದ ರೀತಿಯಲ್ಲಿ ಫಯಾಜ್ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಜಿಲ್ಲಾಧ್ಯಕ್ಷ ಪುರುಷೋತ್ತಮ ಅವರಿಗೆ ತಾಕೀತು ಮಾಡಿ, ತಾಲ್ಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಹುರಿದುಂಬಿಸಿದ್ದು ಫಲ ನೀಡಿದೆ.
ತಾಲ್ಲೂಕು ಪತ್ರರ್ತರ ಸಂಘದ ಅಧ್ಯಕ್ಷ ಆನಂದ್ ಸಿಂಗ್, ಸಿದ್ದಲಿಂಗಸ್ವಾಮಿ, ಲೋಕೇಶ್ ನೇತೃತ್ವದಲ್ಲಿ ಪತ್ರಕರ್ತರೆಲ್ಲರೂ ಸೇರಿ ದೇಣಿಗೆ ಸಂಗ್ರಹ ಪ್ರಯತ್ನ ನಡೆಯಿತು. ರಾಜ್ಯ ಮತ್ತು ಜಿಲ್ಲಾ ಸಂಘ ಹಾಗೂ ತಾಲ್ಲೂಕು ಸಂಘ ಸೇರಿ ಒಟ್ಟು 1.73 ಲಕ್ಷ ರೂ ಸಂಗ್ರಹಿಸಲಾಗಿತ್ತು.
ಇನ್ನು ಬುಧವಾರ ಕುಣಿಗಲ್ ತಾಲ್ಲೂಕು ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಯಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಲ್ಲದೆ, ಅವರ ಪತ್ನಿ ಫರಿದಾ ಬೇಗಂ ಅವರಿಗೆ ಚೆಕ್, ಡಿಡಿ, ನಗದು ಸೇರಿ ಒಟ್ಟು 1.73 ಲಕ್ಷ ಪರಿಹಾರವನ್ನು ಹಸ್ತಾಂತರಿಸಲಾಯಿತು.
Key words: tumakur- 1.73 lakh – Kunigal journalist- Fayaz -family.