ಜನಪರ ಕಾರ್ಯಕ್ರಮಗಳಿಂದ ನಮ್ಮ ಗೆಲುವು: ಮೋದಿ, ದೇವೇಗೌಡರಿಗೆ ಧನ್ಯವಾದ ಅರ್ಪಿಸಿದ ವಿ.ಸೋಮಣ್ಣ.

ತುಮಕೂರು,ಜೂನ್,4,2024 (www.justkannada.in): ದೇಶದ ವ್ಯವಸ್ಥೆಯಲ್ಲಿ  ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮದಿಂದ ನಾವೆಲ್ಲ ಗೆದ್ದಿದ್ದೇವೆ. ಈ ಗೆಲುವನ್ನು ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಸಲ್ಲಿಸುತ್ತೇನೆ ಎಂದು ತುಮಕೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ  ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ನುಡಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ತುಮಕೂರಿನ ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಗೆಲುವನ್ನು ದೇವೇಗೌಡರು ಹಾಗೂ ಪ್ರಧಾನಿ ಮೋದಿಗೆ ಸಲ್ಲಿಸುತ್ತೇನೆ. ಎರಡು ಬಾರಿ ಸೋತ ನನಗೆ ಅಮಿತ್ ಶಾ ಅವಕಾಶ ಕೊಟ್ಟರು. ಯಡಿಯೂರಪ್ಪರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ನನ್ನ ಆರಾಧ್ಯ ದೈವ ಶಿವಕುಮಾರ ಶ್ರೀಗಳು ಹಾಗೂ ಚುಂಚನಗಿರಿ ಶ್ರೀಗಳ ಆಶೀರ್ವಾದದಿಂದ ಮತ್ತೆ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ದೇಶದ ವ್ಯವಸ್ಥೆಯಲ್ಲಿ ಜನಪರ ಕಾರ್ಯಕ್ರಮದಿಂದ ನಾವೆಲ್ಲ ಗೆದ್ದಿದ್ದೇವೆ. ಜೆಡಿಎಸ್ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಹೊರಗಿನ ಅಭ್ಯರ್ಥಿ ಎಂದು ಪದೇಪದೇ ಎಚ್ಚರಿಕೆ ಕೊಡುತ್ತಿದ್ದರು. ಅದನ್ನು ಎಚ್ಚರಿಕೆ ಗಂಟೆ ಎಂದು ಭಾವಿಸಿ ಹೆಚ್ಚಿಗೆ ದುಡಿದೆ. ಹಾಗಾಗಿ ಗೆಲುವು ಸಾಧಿಸಿದ್ದೇನೆ. ದೇಶದಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಇಂಡಿಯಾ ಒಕ್ಕೂಟದ ಅಪಪ್ರಚಾರ ಕಾರಣ. ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ತೆಗಿತಾರೆ ಅನ್ನೋ ಅಪಪ್ರಚಾರ ಮಾಡಿದ್ದಾರೆ. ಇದು ಸ್ವಲ್ಪ ಹಿನ್ನಡೆಗೆ ಕಾರಣ ಎಂದು ವಿ.ಸೋಮಣ್ಣ ಹೇಳಿದರು.

ಕುಮಾರಸ್ವಾಮಿ ಅವರು ಮಂತ್ರಿ ಆಗಲಿ ಅನ್ನೋದು ನನ್ನ ಬಯಕೆ. ಮಾಧುಸ್ವಾಮಿ ಅವರನ್ನು ಪಕ್ಷಕ್ಕೆ  ಕರೆದುಕೊಂಡು ಬಂದೆ. ಆದರೆ ಅವರ ನಡವಳಿಕೆ, ನೀಚ ಬುದ್ದಿಯನ್ನು ಬಿಟ್ಟು ಸರಿಹೋಗಲಿ. ಜಿ.ಪರಮೇಶ್ವರ್ ಹಾಗೂ ಕೆ. ಎನ್ ರಾಜಣ್ಣ ನಾವು ಹಳೇ ಸ್ನೇಹಿತರು. ಅವರ್ಯಾರು ನಮ್ಮ ವಿರುದ್ಧ ಹೆಚ್ಚಿಗೆ ಮಾತಾಡಿಲ್ಲ. ನಾವೆಲ್ಲ ಈಗ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ವಿ.ಸೋಮಣ್ಣ ತಿಳಿಸಿದರು.

Key words: Tumakur, won, BJP, Candidate, V. Somanna