ಬೆಂಗಳೂರು,ಜುಲೈ,30,2022(www.justkannada.in): ಯದುಗಿರಿ ಯತಿರಾಜ ಮಠದ ಶ್ರೀ ಗಳಾದ ಯದುಗಿರಿ ಯತಿರಾಜ ನಾರಾಯಣ ಜೀಯರ್ ಸ್ವಾಮೀಜಿ ಅವರಿಗೆ ಶನಿವಾರ ತುಮಕೂರು ವಿ.ವಿ.ದ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.
ಇದರ ಅಂಗವಾಗಿ ನಗರದ ಚೌಡಯ್ಯ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಶ್ರೀ ಗಳಿಗೆ ಈ ಪದವಿಯನ್ನು ಪ್ರದಾನ ಮಾಡಿದರು. ಸಮಕುಲಾಧಿಪತಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, “ಯತಿರಾಜ ಮಠದ ಶ್ರೀಗಳು ರಾಮಾನುಜಾಚಾರ್ಯರ ತತ್ವ ಮತ್ತು ಸಿದ್ಧಾಂತದ ಅನುಯಾಯಿಗಳಾಗಿದ್ದಾರೆ. ವಸುಧೈವ ಕುಟುಂಬಕಂ ಸೂತ್ರದಲ್ಲಿ ನಂಬಿಕೆ ಇಟ್ಟಿರುವ ಅವರು ಸನಾತನ ಧರ್ಮದ ಸಂರಕ್ಷಕರಾಗಿದ್ದಾರೆ” ಎಂದರು.
ಸ್ವಾಮೀಜಿಗಳು ಸರ್ವ ಸಮಾನತೆ ಮತ್ತು ನೈತಿಕ ಜಾಗೃತಿಯ ಪ್ರತಿಷ್ಠಾಪಿಸುತ್ತಿದ್ದಾರೆ. ಇದರಿಂದಾಗಿ ಶ್ರೀಗಳ ನಡೆ-ನುಡಿಗಳಿಗೆ ಸಾಮಾಜಿಕ ಆಯಾಮ ಬಂದಿದೆ ಎಂದು ಅವರು ಬಣ್ಣಿಸಿದರು.
ಪೂಜ್ಯರು ರಾಮಾನುಜ ಇಂಟಿಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಕಾರ್ಯಕ್ರಮದಡಿ ತೊಂಡನೂರಿನ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಅಲ್ಲಿಗೆ ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದ್ದು, ಶೈಕ್ಷಣಿಕ ಮತ್ತು ಸಾಮಾಜಿಕ ಸಬಲೀಕರಣದ ಹಾದಿಯಲ್ಲಿ ಸಾಗಿದ್ದಾರೆ ಎಂದು ಅವರು ನುಡಿದರು.
ಶ್ರೀಗಳು ಕಾಶ್ಮೀರದಲ್ಲೂ ರಾಮಾನುಜರ ಪ್ರತಿಮೆ ಸ್ಥಾಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಕೂಡ ಆಚಾರ್ಯರ ಪ್ರತಿಮೆ ಅನಾವರಣ ಆಗಲಿದೆ ಎಂದು ಅವರು ಪ್ರಕಟಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನೈತಿಕ ಮೌಲ್ಯಗಳ ಕಲಿಕೆಗೆ ಆದ್ಯತೆ ಕೊಡಲಾಗಿದೆ. ಇದಕ್ಕೆ ಸಾಧು ಸಂತರ ಮನಃಪೂರ್ವಕ ಬೆಂಬಲವಿದೆ. ಇದಕ್ಕಾಗಿ ಪ್ರಧಾನ ಮಂತ್ರಿ ಮೋದಿ ಅಭಿನಂದನಾರ್ಹರು ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.
ಕಾರ್ಯಕ್ರಮದಲ್ಲಿ ಕುಲಪತಿ ವೆಂಕಟೇಶ್ವರಲು, ಕುಲಸಚಿವ ನಿರ್ಮಲ್ ರಾಜು ಮುಂತಾದವರು ಉಪಸ್ಥಿತರಿದ್ದರು.
Key words: Tumkur university- doctorate -Mr. Yathiraja Math shree