ನವದೆಹಲಿ:ಜುಲೈ-18:(www.justkannada.in) ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿರುವ ಟ್ವಿಟರ್ ಹೊಸ ವಿನ್ಯಾಸದಲ್ಲಿ ಪ್ರಸ್ತುತಗೊಂಡಿದೆ. ಟ್ವೀಟರ್ ನ ವಿಭಿನ್ನ ವಿನ್ಯಾಸವನ್ನು ಕಂಡು ಮುಂಜಾನೆಯೇ ಲಾಗಿನ್ ಆದವರು ಒಂದು ಕ್ಷಣ ಶಾಕ್ ಆಗಿದ್ದಾರೆ. ಟ್ವಿಟರ್ ವಿನ್ಯಾಸದಲ್ಲಿ ಬದಲಾವಣೆ ಆಗಿರುವುದಕ್ಕೆ ಬಳಕೆದಾದರು ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿನ್ಯಾಸದಲ್ಲಿ ತಾನು ಮಾಡಿರುವ ಬದಲಾವಣೆ ಕುರಿತು ಟ್ವೀಟಿಗರಿಗೆ ಸಂದೇಶ ನೀಡಿರುವ ಟ್ವಿಟರ್ ಸಂಸ್ಥೆ, ಅನುದಿನವೂ ಬಳಕೆದಾರರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂದು ನಾವು ಬಹುದೊಡ್ಡ ಹೆಜ್ಜೆಯನ್ನಿರಿಸಿದ್ದೇವೆ. ಈ ಹೊಸ ವಿನ್ಯಾಸವು, ಮತ್ತಷ್ಟು ಉತ್ತಮಪಡಿಸಿದ ಹಾಗೂ ಹೊಸ ಸೌಲಭ್ಯಗಳನ್ನು ತ್ವರಿತವಾಗಿ ನಿಮ್ಮೆಲ್ಲರಿಗೂ ತಲುಪಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದೆ.
ಆದರೆ, ವಿಶ್ವದಾದ್ಯಂತ ಇರುವ ಟ್ವೀಟಿಗರು ಟ್ವಿಟರ್ನ ಹೊಸ ವಿನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಹೊಸ ವಿನ್ಯಾಸವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಕೆಲವರು ಬುಕ್ಮಾರ್ಕ್ನ ಹೊಸ ಸೌಲಭ್ಯವನ್ನು ಮೆಚ್ಚಿಕೊಂಡಿದ್ದರೂ, ವಿನ್ಯಾಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ಹೊಸ ಮಾಡುವ ಮೂಲಕ ಈಗ ಮತ್ತೊಮ್ಮೆ ಎಡವಟ್ಟು ಮಾಡಿದ್ದೀರಿ. ಇದರಿಂದ ತುಂಬಾ ಬೇಸರವಾಗುತ್ತಿದೆ. ನಾಲ್ಕು ವರ್ಷಗಳೆ ಕಳೆದರೂ ವಿಡಿಯೋ ಬಫರಿಂಗ್ ಸಮಸ್ಯೆಯನ್ನು ಪರಿಹರಿಸಲು ನಿಮಗೆ ಸಾಧ್ಯವಾಗಿಲ್ಲ. ಅದನ್ನು ಮಾಡುವುದು ಬಿಟ್ಟು, ವಿನ್ಯಾಸವನ್ನು ಬದಲಿಸಿದ್ದೀರಿ. ಇದು ಸುಲಭ ಬಳಕೆಗೆ ನಿಲುಕದಾಗಿದೆ ಎಂದು ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹೊಸ ವಿನ್ಯಾಸ ನಮಗೆ ಹಿಂಸೆಯಾಗುತ್ತಿದೆ. ವಿನ್ಯಾಸ ಬದಲಾದರೂ ಎಡಿಟ್ ಸೌಲಭ್ಯ ಕೊಟ್ಟಿಲ್ಲ. ಹಿಂದಿನ ವಿನ್ಯಾಸವೇ ಚೆನ್ನಾಗಿತ್ತು ಎಂದು ಗುಡುಗಿದ್ದಾರೆ.