ದ್ವಿಭಾಷಾ ಪ್ರಸ್ತಾಪಕ್ಕೆ ತ್ರಿಶಂಕು: ಸಂಪುಟ ಉಪಸಮಿತಿ ಹಂತದಲ್ಲೇ ಬಾಕಿ

ಬೆಂಗಳೂರು:ಜೂ-6: ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯದಲ್ಲಿ ಹಿಂದಿ ಹೇರಿಕೆ ಸಹಿಸಲ್ಲ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತಲೇ ಇದ್ದು, ತ್ರಿಭಾಷಾ ಸೂತ್ರ ಬೇಡ ಎಂಬ ಕೂಗೂ ಎದ್ದಿದೆ. ಇದೇ ಹೊತ್ತಲ್ಲಿ ರಾಜ್ಯ ಸರ್ಕಾರ ತನ್ನ ಮುಂದಿರುವ ದ್ವಿಭಾಷಾ ಸೂತ್ರದ ಪ್ರಸ್ತಾಪವನ್ನು ಕಳೆದೆರಡು ವರ್ಷದಿಂದ ಇನ್ನೂ ‘ತ್ರಿಶಂಕು’ ಸ್ಥಿತಿಯಲ್ಲಿಟ್ಟಿದೆ.

ಮೋದಿ ಸರ್ಕಾರ-1ರಲ್ಲಿ ಹೊಸ ಶಿಕ್ಷಣ ನೀತಿ ತರುವ ಪ್ರಸ್ತಾಪವಾಗುತ್ತಿದ್ದಂತೆ ಅಂದು ರಾಜ್ಯದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ರಾಜ್ಯಕ್ಕೂ ಒಂದು ಹೊಸ ಶಿಕ್ಷಣ ನೀತಿಯ ಅಗತ್ಯವನ್ನು ಪ್ರಸ್ತಾಪಿಸಿತ್ತು. ಅಲ್ಲದೆ ಕರ್ನಾಟಕ ಜ್ಞಾನ ಆಯೋಗದ ಮೂಲಕ ಕರ್ನಾಟಕ ಶಾಲಾ ಶಿಕ್ಷಣ ನೀತಿ-2017ಅನ್ನು ಸರ್ಕಾರಕ್ಕೆ ಸಲ್ಲಿಸಿತು.

ಶಾಲಾ ಕೊಠಡಿ ಮೂಲ ಸೌಕರ್ಯ, ಪೂರ್ವ ಪ್ರಾಥಮಿಕ ತರಗತಿ ಆರಂಭ, ಶಿಕ್ಷಕರಿಗೆ ಕಲಿಕೇತರ ಕೆಲಸಗಳಿಂದ ಮುಕ್ತಿಗೊಳಿಸುವುದು, ಶಿಕ್ಷಕರ ಕೊರತೆ ನೀಗಿಸುವುದು, ಶಾಲೆಗಳಲ್ಲಿ ಇ-ಲೈಬ್ರರಿ, ಇ-ಬುಕ್ ಸೇರಿ ಕಾಲೋಚಿತ ತಂತ್ರಜ್ಞಾನ ಅಳವಡಿಕೆ, ಇಂಗ್ಲಿಷನ್ನು ಒಂದು ಭಾಷೆಯಾಗಿ ಒಂದನೇ ತರಗತಿಯಿಂದ ಕಲಿಸುವುದು ಸೇರಿ ಹತ್ತಾರು ವಿಚಾರಗಳನ್ನು ನೀತಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಇದರಲ್ಲಿ ಎಷ್ಟು ಭಾಷೆ ಕಲಿಯಬೇಕೆಂಬ ಬಗ್ಗೆಯೂ ಉಲ್ಲೇಖಿಸಲಾಗಿತ್ತು. ಸರ್ಕಾರ ನೀತಿಯನ್ನು ಒಪ್ಪಿ ಹಲವು ಕ್ರಮಕೈಗೊಂಡಿದೆ. ಅಷ್ಟೇ ಅಲ್ಲದೆ, ಸಮಿತಿಯ ಶಿಫಾರಸು ಮತ್ತು ಇಲಾಖೆ ತೆಗೆದುಕೊಳ್ಳಬೇಕಾದ ವಿಷಯಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿದೆ.

ಬೋಧನಾ ಮಾಧ್ಯಮ ಮತ್ತು ವಿಷಯಗಳ ಬಗ್ಗೆ ನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮಗು ಗ್ರೇಡ್ 8ರಿಂದ 10ನೇ ತರಗತಿವರೆಗೆ ಬೋಧನಾ ಮಾಧ್ಯಮವಾಗಿ 1 ಭಾಷೆ ಮತ್ತು ವಿದ್ಯಾರ್ಥಿಯ ಆಯ್ಕೆಗೆ ಅನುಗುಣವಾಗಿ ಮತ್ತೊಂದು ಹೆಚ್ಚುವರಿ ಭಾಷೆ ಬಳಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಡಲಾಗಿತ್ತು. ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ತನ್ನ ಹಂತದ ತೀರ್ವನವಲ್ಲದ ಕಾರಣ ಸಂಪುಟದ ವಿವೇಚನೆಗೆ ಬಿಟ್ಟಿತ್ತು.

ಅಂದರೆ, ರಾಜ್ಯದಲ್ಲಿ ಪ್ರೌಢಶಿಕ್ಷಣಕ್ಕೆ 2 ಭಾಷೆ ಸೂಕ್ತ ಎಂಬುದನ್ನು ಉಲ್ಲೇಖಿಸಲಾಗಿತ್ತು. ಪ್ರಸ್ತುತ ರಾಜ್ಯ ಪಠ್ಯಕ್ರಮದಲ್ಲಿ ತ್ರಿಭಾಷಾ ಪದ್ಧತಿ ಇದ್ದು, ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ ಭಾಷೆಯ ಪೈಕಿ 3 ಭಾಷೆ ಕಲಿಸಲಾಗುತ್ತಿದೆ. ಮೂರರ ಪೈಕಿ ಕನ್ನಡ ಕಡ್ಡಾಯ. ಮೊದಲ ಭಾಷೆಯಾಗಿ ಸಂಸ್ಕೃತ ಆರಿಸಿಕೊಂಡರೆ, ಮೂರನೇ ಭಾಷೆಯಾಗಿ ಕನ್ನಡ ಕಡ್ಡಾಯ, ಇಂಗ್ಲಿಷ್ ಅನಿವಾರ್ಯ.

ಈ ಪದ್ಧತಿಯಲ್ಲಿ 3 ಭಾಷೆ ಪೈಕಿ 2 ಕಲಿತರೆ ಸಾಕು. ಮೂರನೇ ಭಾಷೆ ಕಲಿಯುವ ಸಮಯದಲ್ಲಿ ಗಣಿತ, ವಿಜ್ಞಾನದಂಥ ಕೋರ್ ವಿಷಯಗಳ ಬಗ್ಗೆ ವಿದ್ಯಾರ್ಥಿ ಹೆಚ್ಚು ಗಮನ ಕೊಡಬಹುದು. ಅಲ್ಲದೆ ಮೂರನೇ ಭಾಷೆ ಬೇಕಿದ್ದರೆ ಶಾಲೆ ಹೊರತಾಗಿ ಕಲಿಯಬಹುದು ಎಂಬ ಅಭಿಪ್ರಾಯ ವರದಿ ಸಿದ್ಧಪಡಿಸಿದ ತಜ್ಞರಲ್ಲಿತ್ತು.

ಮೂರು ಭಾಷೆ ಕಡ್ಡಾಯ ಆಗಿರುವುದರಿಂದ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಸ್ಕೋರಿಂಗ್ ಸವಾಲಾಗಿದೆ. ಕೇಂದ್ರೀಯ ಪಠ್ಯಕ್ರಮಕ್ಕೆ ಹೋಲಿಸಿದರೆ ರಾಜ್ಯ ಪಠ್ಯಕ್ರಮದಲ್ಲಿ ತ್ರಿಭಾಷಾ ಪದ್ಧತಿ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲು ಎನ್ನಲಾಗುತ್ತಿದೆ.

ವಿಜಯವಾಣಿಗೆ ಲಭಿಸಿದ ಮಾಹಿತಿ ಪ್ರಕಾರ ಸಂಪುಟ ಸಭೆ ಮುಂದೆ ದ್ವಿಭಾಷಾ ಪ್ರಸ್ತಾಪ ಚರ್ಚೆಯಾಗಿದ್ದು, ತೀರ್ವನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಪುಟ ಉಪ ಸಮಿತಿ ರಚಿಸಿ ವರದಿ ಬಂದ ನಂತರ ಕ್ರಮಕ್ಕೆ ನಿರ್ಧರಿಸಲಾಗಿತ್ತು. ಸಂಪುಟ ಉಪ ಸಮಿತಿ ಈ ವಿಚಾರದಲ್ಲಿ ಈ ವರೆಗೆ ಒಂದೂ ಸಭೆ ನಡೆಸಿಲ್ಲ. ಸಭೆ ನಡೆಸಿ ವರದಿ ನೀಡಿದ ಬಳಿಕ ಸರ್ಕಾರ ನಿರ್ಧರಿಸಬಹುದು.

ತೀರ್ಮಾನ ಆಗಬೇಕಾದ ವಿಚಾರ

1. ಹಿಂದಿ-ಸಂಸ್ಕೃತ ಕಲಿಕೆಯನ್ನು ‘ಕಡ್ಡಾಯ’ ಕೈಬಿಟ್ಟರೆ ಎದುರಾಗುವ ಶೈಕ್ಷಣಿಕ ಸವಾಲೇನು?

2. ಈಗ ಈ ಭಾಷೆ ಬೋಧಿಸುವ ಶಿಕ್ಷಕರನ್ನು ಎಲ್ಲಿ ಬಳಸಿಕೊಳ್ಳಬೇಕು?

3. ಕಡ್ಡಾಯ ತೆಗೆದು ಒಂದು ಭಾಷೆಯಾಗಿ ಮಾತ್ರ ಕಲಿಸಲು ಸಾಧ್ಯವೇ?

ಭಾಷೆ ವಿಚಾರದಲ್ಲಿ ನಿರ್ಧರಿಸಲು ಸಂಪುಟ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಆ ಸಮಿತಿ ರ್ಚಚಿಸಿ ವರದಿ ಕೊಟ್ಟ ಬಳಿಕ ಸಂಪುಟ ತೀರ್ವನಿಸಲಿದೆ.

| ಉಮಾಶಂಕರ್ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ

ಸರ್ಕಾರಕ್ಕೇ ಹೊರೆ

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ರಾಜ್ಯ ಸರ್ಕಾರದ ತೀರ್ಮಾನ ಈಗ ವಿವಾದಕ್ಕೀಡಾಗಿದೆ. ಶಾಲಾ ಬ್ಯಾಗ್ ಮತ್ತು ಹೋಮ್ ವರ್ಕ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಶಿಕ್ಷಣ ಇಲಾಖೆಯ ಆದೇಶ ಒಪ್ಪಲು ಸಾಧ್ಯವೇ ಇಲ್ಲ. ಒಂದು ವಾರದೊಳಗೆ ಮುಖ್ಯಮಂತ್ರಿ ಸಭೆ ಕರೆದು ಬಿಕ್ಕಟ್ಟು ಪರಿಹರಿಸದಿದ್ದರೆ ಬೀದಿ ಗಿಳಿಯುತ್ತೇವೆ ಎಂದು ಖಾಸಗಿ ಶಾಲೆಗಳು ಸರ್ಕಾರಕ್ಕೆ ಸವಾಲು ಹಾಕಿವೆ.

ಈ ವಿಚಾರದಲ್ಲಿ ರಾಜ್ಯ, ಸಿಬಿಎಸ್​ಇ ಹಾಗೂ ಐಸಿಎಸ್​ಇ ಪಠ್ಯಕ್ರಮದ ಶಾಲೆಗಳು ಒಂದಾಗಿ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಮಾತ್ರವಲ್ಲ ಈ ಬಗ್ಗೆ ಕೆಲವೇ ದಿನಗಳಲ್ಲಿ 10 ಸಾವಿರ ಪಾಲಕರಿಂದ ಅಭಿಪ್ರಾಯ ಸಂಗ್ರಹಿಸಿ, ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿವೆ.

ಸರ್ಕಾರದ ಕ್ರಮ ಅವೈಜ್ಞಾನಿಕ, ಕಲಿಕೆಗೆ ಪೂರಕವಾಗಿಲ್ಲ. ಮನವಿಗೆ ಮಣಿಯದೆ ಇದ್ದರೆ ಹೋರಾಟಕ್ಕೆ ನಿರ್ಧರಿಸುತ್ತೇವೆ. ಅಗತ್ಯವಾದರೆ ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧ.

| ಶಶಿಕುಮಾರ್ ಪ್ರಧಾನ ಕಾರ್ಯದರ್ಶಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ

ಖಾಸಗಿ ಶಾಲೆಗಳು ಈಗ ವಿರೋಧಿಸುವುದು ತಪ್ಪು. ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಆದೇಶ ಜಾರಿ ಮಾಡಬೇಕು. ವೈಜ್ಞಾನಿಕವಾಗಿ ತೀರ್ಮಾನ ಮಾಡಲಾಗಿದೆ.

| ನಿರಂಜನ ಆರಾಧ್ಯ ಶಿಕ್ಷಣ ತಜ್ಞ
ಕೃಪೆ:ವಿಜಯವಾಣಿ

ದ್ವಿಭಾಷಾ ಪ್ರಸ್ತಾಪಕ್ಕೆ ತ್ರಿಶಂಕು: ಸಂಪುಟ ಉಪಸಮಿತಿ ಹಂತದಲ್ಲೇ ಬಾಕಿ
two-language-formula-state-govt-national-education-policy-three-language-formula-central-govt