ಯುಗಾದಿ “ವರ್ಷದ ತೊಡಕು “: ನಾನ್‌ ವೆಜ್‌ ಪ್ರಿಯ ಹಿಂದೂಗಳ ಪಾಲಿಗೆ “ ಬಾಡೇ ನಮ್‌ ಗಾಡು”…!

On the first day of ugadi festival, everyone celebrates the festival by eating sweets together, while in rural areas (now common in urban areas), on the next day of Ugadi festival, non-vegetarians cook mutton, fish and chicken and give importance to non-vegetarian food.

ಮೈಸೂರು, ಏ.೦೧,೨೦೨೫: ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಸಿಹಿತಿಂದು ಹಬ್ಬ  ಆಚರಿಸಿದರೆ ಗ್ರಾಮೀಣ ಭಾಗದಲ್ಲಿ (ಈಗ ನಗರ ಪ್ರದೇಶದಲ್ಲೂ ಸರ್ವೆ ಸಾಮಾನ್ಯ)ಯುಗಾದಿ ಹಬ್ಬದ ಮಾರನೆಯ ದಿನ ಮಾಂಸಹಾರಿಗಳು ಕುರಿ, ಕೋಳಿ ಅಡುಗೆ ಮಾಡಿ ಮಾಂಸಾಹಾರಕ್ಕೆ ಪ್ರಾಮುಖ್ಯತೆ ನೀಡಿ ಆಮೂಲಕ ವರ್ಷದ ತೊಡಕು ಆಚರಿಸುತ್ತಾರೆ.

ಮಾಂಸಾಹಾರಿ ಪ್ರೇಮಿಗಳು ಯುಗಾದಿಗಿಂತ ಈ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು ಇಂದು ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ.

ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ವಿವಿಧ ಮಾಂಸಾಹಾರಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿದೆ.

ಹಿಂದೂ ಪಂಚಾಂಗದಂತೆ ಹೊಸ ಸಂವತ್ಸರದ ಮೊದಲ ದಿನ “ಯುಗಾದಿ ಹಬ್ಬ”.  ಈ ಯುಗಾದಿಗಿಂತಲೂ ಮಾರನೇ ದಿನದ ವರ್ಷ ತೊಡಕು ಮಾಂಸಾಹಾರಿಗಳ ಪಾಲಿಗೆ ಬಾಡೂಟದ ದೊಡ್ಡ ಹಬ್ಬ.

ಯುಗಾದಿ ಹಬ್ಬದ ಮಾರನೆಯ ದಿನದ “ವರ್ಷ ತೊಡಕು ” ಹಬ್ಬ, ಬಹುಜನರು ಬಹು ಸಂಭ್ರಮದಿಂದ ಅನಾದಿಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಹಬ್ಬವಾಗಿದೆ. ವರ್ಷ ತೊಡಕು, ಹೊಸ್ತಡಕು, ಹೊಸ್ದುಡುಕು ಹೀಗೆಲ್ಲ ಕರೆಯಲ್ಪಡುವ ತೊಡಕು ಪದಕ್ಕೆ ಅಡಚಣೆ, ಅಡೆತಡೆ, ನಿಷೇಧ,ಕಠಿಣ ಹಿಗೇ ನಾನರ್ಥಗಳಿವೆಯಾದರೂ ಇಲ್ಲಿವರೆಗೂ ವರ್ಷತೊಡಕಿನ ಆಚರಣೆಗೂ ತೊಡಕು ಪದಕ್ಕೂ ನಿರ್ದಿಷ್ಟವಾದ ಸಂಭಂಧ ಕಲ್ಪಿಸಲು ಸಾಧ್ಯವಾಗಿಲ್ಲ.

ಹೊಸ ಯೋಜನೆಗಳಲ್ಲಿ ತೊಡಗು, ವರ್ಷದ ಮೊದಲ ಬಾಡೂಟದಲ್ಲಿ ತೊಡಗು ಅಂದರೆ ಅಡಗು ಅರ್ಥಾತ್ ಮಾಂಸ ಎಂಬ ಅರ್ಥವಿದೆ. ವರ್ಷಾರಂಭಕ್ಕಷ್ಟೇ ಸೀಮಿತಗೊಳ್ಳದ ವರ್ಷತೊಡಕು, ದೀಪಾವಳಿ, ದಸರಾ, ಕೆಲವು ಕಡೆ ಮಾರ್ಲಮಿ ಹೀಗೆ ಮುಂತಾದ ಹಬ್ಬಗಳ ಮಾರನೇ ದಿನ ಮಾಂಸದೂಟಗಳು ಪರಂಪರಾಗತವಾಗಿ ಆಚರಣೆಯಲ್ಲಿದ್ದು ಅವುಗಳಿಗೆ ವರ್ಷ ತೊಡಕು ಎಂದೇ ಕರೆಯುವುದರಿಂದ, ವರ್ಷ ತೊಡಕು ಒಂದೇ ದಿನಕ್ಕೆ ಸೀಮಿತವಾಗಿಲ್ಲವಾದರೂ ಯುಗಾದಿ ಮಾರನೇ ದಿನದ ವರ್ಷ ತೊಡಕು ಎಲ್ಲ ತೊಡಕುಗಳಿಗಿಂತ ಮಹಾ ತೊಡಕು ಅರ್ಥಾತ್ ಬಾಡೂಟದ ಹಬ್ಬವಾಗಿ ಪ್ರಮುಖ ಸ್ಥಾನ ಪಡೆದಿದೆ.

ಹಲವು ನಾಮ: 

ವರ್ಷತೊಡಕು ಆಚರಣೆ ಎಂಬುದು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡಬಹುದು. ಹಳೆ ಮೈಸೂರು ಪ್ರಾಂತ್ಯದಲ್ಲಂತೂ ವರ್ಷ ತೊಡಕಿನ ಕಾರುಬಾರು! ಜೋರೇ ಜೋರು.

ಬಾಡೂಟದ ಹಬ್ಬವಾದ ಒಂದೆರಡು ದಿನಗಳಲ್ಲಿ ಅಥವಾ ಸಮಯಾವಕಾಶವನ್ನು ಮಾಡಿಕೊಂಡು ಅವರದೇ ಒಂದೊಂದು ಗುಂಪುಗಳು ಒಂದೆಡೆ ಸೇರಿ ಮುಂದಿನವರ್ಷ ತೊಡಕಿಗೆ ಯೋಜನೆಯನ್ನು ರೂಪಿಸುತ್ತಾರೆ. ಗುಂಪಿನ ಪ್ರತಿ ಸದಸ್ಯರು ಇಂತಿಷ್ಟು ಹಣ ಹೂಡಿ (ಮಟನ್ ಚೀಟಿ) ಮರಿ (ಆಡು ಅಥವಾ ಕುರಿ ಮರಿಗಳು) ತರಬೇಕಾಗುತ್ತದೆ. ಮರಿ ತರಲು ಅನುಭವಿಯೊಬ್ಬನನ್ನು ನಿಯೋಜಿಸಲಾಗುತ್ತದೆ. ಆತ ಸುತ್ತಮುತ್ತಲ ವಾರದ ಸಂತೆಗಳಿಗೆ ಹೋಗಿ ತನ್ನ ಚಾಣಕ್ಷತೆಯಿಂದ ಕಣ್ಣಳತೆಯಲ್ಲೇ ಮರಿಯ ತೂಕವನ್ನು ಅಂದಾಜಿಸಿ ನಿಖರ ಬೆಲೆಯನ್ನು ಕಟ್ಟಿ ವ್ಯಾಪಾರ ಮುಗಿಸಿಕೊಂಡು ಮರಿಗಳನ್ನು ತರುತ್ತಾನೆ. ಮರಿಗಳನ್ನು ತಂದ ನಂತರ ಅವುಗಳನ್ನು ದಷ್ಟಪುಷ್ಟವಾಗಿ ಸಾಕಿ ಸಲಹಬಹುದಾದ ಸೂಕ್ತ ವ್ಯಕ್ತಿಯನ್ನು ಮರಿಗಳನ್ನು ಮೇಯಿಸಲು ನಿಯೋಜಿಸಲಾಗುತ್ತದೆ. ಆ ವ್ಯಕ್ತಿಗೆ ಹಬ್ಬದಂದು ಒಂದು ಗುಡ್ಡೆ ಮಾಂಸವನ್ನು ಉಚಿತವಾಗಿ ಕೊಡಲಾಗುತ್ತದೆ. ಮತ್ತೊಂದು ವಿಧಾನವು ಇದೆ. ಅದೇನೆಂದರೆ ಗುಂಪಿನ ಪ್ರತಿ ಸದಸ್ಯರು ಪ್ರತಿ ತಿಂಗಳು ಇಂತಿಷ್ಟು ಹಣ ಹೂಡಿಕೆ ಮಾಡಿ, ಪ್ರತಿಯೊಬ್ಬರು ಹೂಡಿಕೆ ಹಣವನ್ನು ಬಡ್ಡಿಗೆ ಸಾಲವಾಗಿ ತೆಗೆದುಕೊಂಡು ಹಣವನ್ನು ಬೆಳೆಸಿ ಕೊನೆಯಲ್ಲಿ ಆ ಹಣಕ್ಕೆ ಮರಿ ತಂದು ಪಾಲು ಹಾಕಲಾಗುತ್ತದೆ.

ಮರಿಗಳನ್ನು ತರುವುದು ಮತ್ತು ಮರಿಗಳನ್ನು ಸಾಕುವುದು ಒಂದು ಭಾಗವಾದರೆ,ಮರಿ ಕೂಯ್ದು ಪಾಲು ಅಥವಾ ಗುಡ್ಡೆ ಹಾಕುವುದಕ್ಕೂ ಕೂಡ ನೈಪುಣ್ಯತೆ ಬೇಕಾಗುತ್ತದೆ. ಗುಡ್ಡೆ ಬಾಡು ಎಂದರೆ, ಮೇಕೆ ಅಥವಾ ಕುರಿಯ ತಲೆ,ಕಾಲು, ಕಳ್ಳು, ದೊಮ್ಮೆ (ಶ್ವಾಸಕೋಶದ) ಲಿವರ್ (ಈಲಿ) ಚರ್ಬಿ ಸೇರಿದಂತೆ ಪ್ರತಿಯೊಂದು ಭಾಗಗಗಳನ್ನು ಪ್ರತಿ ಗುಡ್ಡೆಗಳಿಗೂ ಸರಿಯಾಗಿ ಹಂಚಿಕೆ ಮಾಡಲಾಗುತ್ತದೆ. ಅಷ್ಟೂ ಸದಸ್ಯರಿಗೆ ತೂಕ ಮತ್ತು ಮಾಂಸದ ತುಂಡುಗಳ ನ್ಯಾಯ ಒದಗಿಸಲಾಗುತ್ತದೆ. ಗುಡ್ಡೆ ಬಾಡು ಮಾದರಿ ಈಗ ನಗರ ಪ್ರದೇಶಗಳಿಗೂ ವಿಸ್ತರಿಸಿಕೊಂಡು ಜನರು ಗುಡ್ಡೆ ಬಾಡಿಗೆ ಮುಗಿಬಿಳುತ್ತಿದ್ದಾರೆ. ಗುಡ್ಡೆ ಬಾಡಿನಲ್ಲಿ ಸರ್ವಾಂಗಗಳು! ಸಲ್ಲುವುದರಿಂದ ಸಾಂಬಾರ್ ರುಚಿ ಹೆಚ್ಚಾಗುತ್ತದೆ ಎಂದು ರುಚಿ ಕಂಡುಕೊಂಡ ಜನರು ಹೇಳುತ್ತಾರೆ. ಗುಡ್ಡೆ ಬಾಡು ಇಷ್ಟವಾಗದ ಜನರು ಪ್ರತ್ಯೇಕವಾಗಿ ಮಾಂಸದಂಗಡಿಗಳಲ್ಲಿ ತಮಗಿಷ್ಟವಾದ ಮಾಂಸ ತಂದು ವರ್ಷತೊಡಕು ಆಚರಿಸಿಕೊಳ್ಳುತ್ತಾರೆ.

ಇನ್‌ ಪುಟ್‌ : ಇಂಟರ್‌ ನೆಟ್‌

key words: Ugadi, “Trouble of the Year”, “Bade Nammgaadu”, non-veg, food

SUMMARY:

Ugadi “Trouble of the Year”: “Bade Namgaadu” for non-veg-loving Hindus!

On the first day of ugadi festival, everyone celebrates the festival by eating sweets together, while in rural areas (now common in urban areas), on the next day of Ugadi festival, non-vegetarians cook mutton, fish and chicken and give importance to non-vegetarian food.