ಮೈಸೂರು,ಮಾರ್ಚ್,25,2024(www.justkannada.in): ಪರಿವಾರ-ತಳವಾರ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದಲ್ಲದೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿರುವ ಕಾರಣ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಯದುವೀರ್ ಕೃಷ್ಣದತ್ತಚಾಮರಾಜ ಒಡೆಯರ್ ಬೆಂಬಲಕ್ಕೆ ನಿಲ್ಲಲು ಬಿಜೆಪಿ ಎಸ್ಟಿ ಮುನ್ನಡೆ ಸಮಾವೇಶದಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಲಕ್ಷ್ಮೀಪುರಂ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣಮಂಟಪದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಪಂಗಡ ಮುನ್ನಡೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಪರಿಶಿಷ್ಟ ವರ್ಗಗಳಿಗೆ ಜಾರಿಗೆ ತಂದಿರುವ ಕಲ್ಯಾಣ ಕಾರ್ಯಕ್ರಮಗಳು, ಪರಿವಾರ ಮತ್ತು ತಳವಾರ ಪದವನ್ನು ಎಸ್ಟಿಗೆ ಸೇರಿ 40ವರ್ಷಗಳಿಂದ ಇದ್ದ ಸಮಸ್ಯೆಯನ್ನು ನಿವಾರಣೆ ಮಾಡಿದ್ದನ್ನು ಪ್ರಸ್ತಾಪಿಸುವ ಜತೆಗೆ, ಶೇ.3.5 ರಿಂದ 7.5ಕ್ಕೆ ಮೀಸಲಾತಿ ಹೆಚ್ಚಿಸಿದ ಬಸವರಾಜ ಬೊಮ್ಮಾಯಿ ಸರ್ಕಾರದ ತೀರ್ಮಾನದಿಂದ ಆಗಿರುವ ಅನುಕೂಲಗಳನ್ನು ಗಮನಿಸಿ ಈ ನಿರ್ಧಾರ ಮಾಡಲಾಯಿತು.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ ವಾಲ್, ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್, ಮಾಜಿ ಸಚಿವ ಎಸ್.ಎ.ರಾಮದಾಸ್, ಎನ್.ಮಹೇಶ್, ಶಾಸಕ ಟಿ.ಎಸ್. ಶ್ರೀವತ್ಸ, ಎ ಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಮಾಜಿ ಮಹಾಪೌರ ಶಿವಕುಮಾರ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕೇಂದ್ರೀಯ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಎಸ್ಟಿ ಮೋರ್ಚಾ ನಗರಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ ಮೊದಲಾದವರ ಸಮ್ಮುಖದಲ್ಲಿ ಪರಿಶಿಷ್ಟ ಪಂಗಡಕ್ಕೆ ಆಗಿರುವ ಅನುಕೂಲಗಳ ಬಗ್ಗೆ ವೀಡಿಯೋ ಪ್ರದರ್ಶಿಸಲಾಯಿತು.
ಸಮಾವೇಶಕ್ಕೆ ಸುಣ್ಣದಕೇರಿ,ವೀರನಗೆರೆ,ತಿಲಕ್ ನಗರ, ಜಯನಗರ ಮೊದಲಾದ ಭಾಗಗಳಿಂದ ನಾಯಕ ಸಮುದಾಯದವರು ಆಗಮಿಸಿ ಬೆಂಬಲ ನೀಡುವ ಜತೆಗೆ ಯದುವೀರ್ ಪರವಾಗಿ ಕೆಲಸ ಮಾಡುವ ಸಂಕಲ್ಪ ಮಾಡಿದರು. ಮದಕರಿನಾಯಕರ ಹೆಗ್ಗುರುತು ಕತ್ತಿಗುರಾಣಿಯನ್ನು ಯದುವೀರ್ ಅವರಿಗೆ ನೀಡಿ ಅಭಿನಂದಿಸಲಾಯಿತು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ವಾತನಾಡಿ, ವಸತಿ ಶಾಲೆಗಳ ಅಭಿವೃದ್ಧಿ ಮತ್ತು ಗ್ರಾಮಗಳಲ್ಲಿ ಹಿಂದುಳಿದವರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಮಾಡಿದೆ. ಸುವಾರು ೧೭,೦೦೦ ಗ್ರಾಮಗಳು ಇದರ ಪ್ರಯೋಜನ ಪಡೆದಿವೆ. ಮುದ್ರಾ ಯೋಜನೆ ಮುಖಾಂತರ ಹಲವರು ಪರಿಶಿಷ್ಟರು ಉದ್ಯಮಿಗಳಾಗಿದ್ದಾರೆ. ಶೇ ೫೦ಕ್ಕೂ ಹೆಚ್ಚು ಹಿಂದುಳಿದವರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹೇಳಿದರು.
ಮೈಸೂರು ರಾಜರು ಮಾಡಿರುವಂತಹ ಕಲ್ಯಾಣದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಅವರು ಭಾರತವನ್ನು ಸುವರ್ಣಯುಗದತ್ತ ಕೊಂಡೊಂಯ್ಯುತ್ತಿದ್ದು ಮೈಸೂರು ಕೂಡ ಆ ಪ್ರಯೋಜನ ಪಡೆದಿದೆ. ಹಾಗಾಗಿ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಮೈಸೂರು ಅರಮನೆ ಮತ್ತು ನಾಯಕ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಅರಮನೆಗೆ ಬೆಂಕಿ ಬಿದ್ದಾಗ ನಾಯಕ ಸಮಾಜದವರು ರಕ್ಷಿಸಿದರೆಂಬುದು ಗೊತ್ತಿದೆ. ಚಾಮುಂಡಿಬೆಟ್ಟದಲ್ಲಿ ತೇರು ಎಳೆಯುವವರು ನಾಯಕ ಸಮಾಜ. ಹಾಗಾಗಿ, ಈ ಸಮುದಾಯ ಇಟ್ಟಿರುವ ವಿಶ್ವಾಸವನ್ನುಮತ್ತಷ್ಟು ಹೆಚ್ಚಿಸಲಾಗುವುದು ಎಂದರು.
ಎಸ್.ಟಿ.ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರ ಹನುಮಂತ ಮಾತನಾಡಿ, ಮೈಸೂರು-ಚಾಮರಾಜನಗರದಲ್ಲಿ ಪರಿಶಿಷ್ಟ ಪಂಗಡ ಸಮುದಾಯವು ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಈಗ ಸಮುದಾಯಕ್ಕೆ ಸೂಕ್ತ ಸ್ಥಾನಮಾನ್ಯತೆ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ಕೊಡಿ –ಸಂಸದ ಪ್ರತಾಪ್ ಸಿಂಹ
ಮೈಸೂರು: ದೇಶದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಬೇಕು. ನಾಯಕ ಸಮುದಾಯವು ಮದಕರಿ ನಾಯಕ ಮತ್ತು ಒನಕೆ ಓಬವ್ವರನ್ನು ಕೊಂದ ದುಷ್ಟರನ್ನು ಮರೆಯಬಾರದು. ಅಂತವರ ಕೈಗೆ ಅಧಿಕಾರ ನೀಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ಪರಿವಾರ-ತಳವಾರ ಪರಿಶಿಷ್ಟ ಪಂಗಡ ಸೇರ್ಪಡೆ ವಿಚಾರದಲ್ಲಿ ಮಾಜಿ ಸಂಸದ ದಿವಂಗತ ಶ್ರೀಕಂಠದತ್ತ ಚಾಮರಾಜ ಒಡೆಯರ್ ಆದಿಯಾಗಿ ಯಾವ ಸಂಸದರೂ ಮಾಡದ ಕೆಲಸವನ್ನು ನಾನು ಮಾಡಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಪರಿವಾರ ಮತ್ತು ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ೧೯೮೨ ರಿಂದಲೂ ಇದ್ದ ಬೇಡಿಕೆಯನ್ನು ಈ ಭಾಗದ ಯಾವುದೇ ಸಂಸದರು ಪರಿಹರಿಸಲಿಲ್ಲ. ಶ್ರೀಕಂಠ ದತ್ತ ನರಸಿಂಹರಾಜರ ಆದಿಯಾಗಿ ಅಡಗೂರು ಎಚ್.ವಿಶ್ವನಾಥ್, ಸಿ.ಎಚ್.ವಿಜಯಶಂಕರ್ ಅವರು ಸೇರಿ ಯಾವ ಸಂಸದರೂ ನಾಯಕ ಸಮುದಾಯದಿಂದ ಬೇಡಿಕೆ ಈಡೇರಿಸಲಿಲ್ಲ. ಆದರೆ, ನಾನು ಸಂಸದನಾಗಿ ನಾಲ್ಕು ವರ್ಷಗಳಲ್ಲಿ ನಾಯಕ ಸಮುದಾಯದ ಬೇಡಿಕೆ ಈಡೇರಿಸಿದೆ ಎಂದು ಹೇಳಿದರು.
ಸಮುದಾಯದವರ ಶೇಕಡಾ ೩ರಷ್ಟು ಮೀಸಲಾತಿಯನ್ನು ಶೇ ೭ಕ್ಕೆ ಹೆಚ್ಚಿಸುವಲ್ಲಿ ಹೋರಾಟ ಮಾಡಿದ್ದೇನೆ ಎಂದರು. ಮದಕರಿ ನಾಯಕರ ಚರಿತ್ರೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿ, ದೇಶಕ್ಕೆ ತಿಳಿಯುವಂತೆ ಮಾಡಿದೆ. ನಾನು ಸಂಸದನಾಗುವಲ್ಲಿ ನಾಯಕ ಸಮುದಾಯದಿಂದ ಬೆಂಬಲ ಸಾಕಷ್ಟಿದೆ. ರಾಜಕಾರಣದಲ್ಲಿ ಬದಲಾವಣೆ ಅನಿವಾರ್ಯ. ಇಂದು ಮೈಸೂರಿಗೆ ಸಾಕಷ್ಟು ಕೊಡುಗೆ ನೀಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಟುಂಬದ ಯದುವೀರ್ ಚುನಾವಣೆಗೆ ನಿಂತಿದ್ದು, ಸಮುದಾಯವು ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕತ್ತಿಗುರಾಣಿ ನೀಡಿ ಅಭಿನಂದಿಸಲಾಯಿತು. ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ದಾಸ್ ಅಗರ್ವಾಲ್, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಎನ್.ಮಹೇಶ್, ಶಾಸಕ ಟಿ.ಎಸ್.ಶ್ರೀವತ್ಸ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಮಾಜಿ ಮಹಾಪೌರ ಶಿವಕುಮಾರ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕೇಂದ್ರೀಯ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ನಗರಾಧ್ಯಕ್ಷ ಎಲ್.ನಾಗೇಂದ್ರ ಮತ್ತಿತರರು ಹಾಜರಿದ್ದರು.
Key words: Unanimous- decision – stand – support –mysore-kodagu- BJP candidate- Yaduveer.