ಮೈಸೂರು,ಡಿಸೆಂಬರ್,22,2020(www.justkannada.in): ಅನುಮತಿ ಪಡೆಯದೇ ಮೈಸೂರು ನಗರ ಪಾಲಿಕೆಯ ರಸ್ತೆಗಳನ್ನು ಅನಧಿಕೃತವಾಗಿ ಕತ್ತರಿಸಿದ್ದರೇ ನಿಗಧಿಪಡಿಸಿದ ಮೊತ್ತದ ಮೂರು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ವಸೂಲು ಮಾಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಆದೇಶಿಸಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಆಗಿಂದ್ದಾಗ್ಗೆ ಅವರ ಸ್ವಂತ ಕಟ್ಟಡಗಳಿಗೆ ಸಂಬಂಧಿಸಿದಂತೆ, ಕುಡಿಯುವ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕಗಳನ್ನು ಪಡೆಯುವ ಸಲುವಾಗಿ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಕತ್ತರಿಸುತ್ತಿದ್ದಾರೆ, ಇದಕ್ಕಾಗಿ ಪಾಲಿಕೆಯಿಂದ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಶುಲ್ಕ ನಿಗಧಿಪಡಿಸಿ ಆದೇಶಿಸಿದೆ.
ಕ್ರ.ಸಂ. ರಸ್ತೆಗಳ ವಿವರ ನಿಗಧಿಪಡಿಸಿರುವ ಶುಲ್ಕ
- ಡಾಂಬರ್ ರಸ್ತೆಗಳಿಗೆ ರೂ. 1200=00 +10% +18%
- ಕಾಂಕ್ರೀಟ್ ರಸ್ತೆಗಳಿಗೆ ರೂ. 2000=00 +10% +18%
- ಪಾದಚಾರಿ ಮಾರ್ಗ ರೂ. 800=00 +10% +18%
ಅದರಂತೆ ಇನ್ನು ಮುಂದೆ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಕತ್ತರಿಸುವುದಕ್ಕಾಗಿ ವಲಯ ಕಚೇರಿಗಳಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ ಮೇಲ್ಕಂಡ ಶುಲ್ಕವನ್ನು ಪಾಲಿಕೆಗೆ ಪಾವತಿಸಿ ಅನುಮತಿ ಪಡೆಯಬೇಕು. ಅಲ್ಲದೆ ಪಾಲಿಕೆಯಿಂದ ಅನುಮತಿ ಪಡೆದು ರಸ್ತೆಗಳನ್ನು ಕತ್ತರಿಸಿದ ನಂತರ ಆ ಭಾಗವನ್ನು ಸರಿಯಾಗಿ ಪುನಃಶ್ಚೇತನಗೊಳಿಸುವುದು ಕಟ್ಟಡ ಮಾಲೀಕರ ಜವಾಬ್ದಾರಿಯಾಗಿದ್ದು, ಒಂದು ವೇಳೆ ಕತ್ತರಿಸಿದ ರಸ್ತೆಯನ್ನು ಸಮರ್ಪಕವಾಗಿ ಪುನಃಶ್ಚೇತನಗೊಳಿಸದೆ ಇದ್ದಲ್ಲಿ ಅಂತಹ ಸಂದರ್ಭದಲ್ಲಿ ಕಟ್ಟಡ ಮಾಲೀಕರಿಂದ ದುಪ್ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ವಸೂಲು ಮಾಡಲಾಗುವುದು.
ಅದೇ ರೀತಿ ಅನುಮತಿ ಪಡೆಯದೇ ನಗರ ಪಾಲಿಕೆಯ ರಸ್ತೆಗಳನ್ನು ಅನಧಿಕೃತವಾಗಿ ಕತ್ತರಿಸಿದ್ದಲ್ಲಿ ಮೇಲೆ ನಿಗಧಿಪಡಿಸಿದ ಮೊತ್ತದ ಮೂರು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ವಸೂಲು ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
Key words: Unauthorized- cutting – roads – Mysore city corporation-fine-order