ಮೈಸೂರು,ಅಕ್ಟೋಬರ್,8,2020(www.justkannada.in): ಎಪಿಎಂಸಿಯಲ್ಲಿ ಮತ್ತಷ್ಟು ಸುಧಾರಣೆಗೆ ನಾವು ಬದ್ದರಾಗಿದ್ದೇವೆ. ಆದರೆ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಕಿಡಿಕಾರಿದರು.
ಮೈಸೂರಿನಲ್ಲಿ ಕೃಷಿ ಸುಧಾರಣಾ ಮಸೂದೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ವಿರೋಧ ಪಕ್ಷಗಳು ವಿನಾಕಾರಣ ಈ ಬಗ್ಗೆ ವಿರೋಧ ಮಾಡುತ್ತಿವೆ. ಆ ಮೂಲಕ ಅಭಿವೃದ್ಧಿಗೆ ತೊಡಕಾಗುವ ಕೆಲಸ ಮಾಡುತ್ತಿವೆ. ರೈತನ ಆದಾಯವನ್ನು ದ್ವಿಗುಣ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ರೈತನ ಸ್ವಾತಂತ್ರ್ಯಕ್ಕೆ ಕಾನೂನು- ಕಟ್ಟಳೆಗಳು ತೊಡಕಾಗಿದ್ದವು. ಆದ್ದರಿಂದ ಕೆಲವು ಕಾನೂನುಗಳಿಗೆ ತಿದ್ದಿಪಡಿ ತಂದಿದ್ದೇವೆ. ಮಾರಾಟ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಿದ್ದೇವೆ ಎಂದರು.
ರೈತನಿಗೆ ವರ್ಷವಿಡೀ ಆರ್ಥಿಕ ಸಬಲೀಕರಣಕ್ಕೆ ಪ್ರಧಾನಿ ಮಂತ್ರಿ ಕಿಶಾನ್ ಯೋಜನೆ ಜಾರಿಗೆ ತಂದಿದ್ದೇವೆ. ಕಳೆದ ವರ್ಷ ಹಾಗೂ ಈ ವರ್ಷ ಉತ್ತಮ ಮಳೆಯಾಗಿದೆ. ಇದರಿಂದಾಗಿ ಶೇ.30ರಷ್ಟು ಬಿತ್ತನೆ ಜಾಸ್ತಿಯಾಗಿದೆ. ಶೇ.35ರಷ್ಟು ರಸಗೊಬ್ಬರವನ್ನು ಕೋವಿಡ್ ಸಂದರ್ಭದಲ್ಲಿ ಪೂರೈಕೆ ಮಾಡಿದ್ದೇವೆ. ಪರಿಣಾಮ ರಸಗೊಬ್ಬರ ಪೂರೈಕೆಯಲ್ಲಿ ಎಲ್ಲಿಯೂ ತೊಂದರೆ ಆಗಿಲ್ಲ. ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಟಿಸುವ ವ್ಯವಸ್ಥೆ ಇತ್ತು. ಗೋಡೋನ್ ನಲ್ಲಿ ಗೊಬ್ಬರ ಇದ್ದರೂ ಹೊರಗೆ ಖಾಲಿಯಾಗಿದೆ ಎಂಬ ಬೋರ್ಡ್ ಹಾಕಲಾಗುತ್ತಿತ್ತು. ಇದರ ವಿರುದ್ಧ ಕರ್ನಾಟಕದಿಂದಲೇ ಹೋರಾಟ ಶುರು ಮಾಡಿದ್ದೆವು. ರಾಜ್ಯಾದ್ಯಂತ 148 ಡೀಲರ್ಗಳ ಲೈಸೆನ್ಸ್ ರದ್ದು ಮಾಡಿದ್ದೇವೆ. ಈ ನಡುವೆ ಲೈಸೆನ್ಸ್ ಕೊಡಿಸುವಂತೆ ನನಗೆ ಹಲವರಿಂದ ಒತ್ತಡ ಬಂತು. ಮಂತ್ರಿಗಳಿಂದಲೇ ಒತ್ತಡಗಳು ಬಂದಿದ್ದವು. ಅದ್ಯಾವುದಕ್ಕೂ ಮಣೆ ಹಾಕದೇ ಲೈಸೆನ್ಸ್ ರದ್ದು ಮಾಡಿ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದವರಿಗೆ ಪಾಠ ಕಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಸ್ನೇಹಿತರು ಬೀದಿ ನಾಟಕ ಶುರು ಮಾಡಿದ್ದಾರೆ.
ನನ್ನ ಬೆಳೆ ನನ್ನ ಹಕ್ಕು ಆಗಬೇಕು. ಒಂದು ದೇಶ ಒಂದು ಮಾರುಕಟ್ಟೆ ಆಗಬೇಕು ಎಂದು ಹೇಳಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ನಾನು ಚಿಕ್ಕವನಿದ್ದಾಗ ಅಮೆರಿಕಾದಿಂದ ಗೋಧಿ ತಂದು ಕೊಡುತ್ತಿದ್ದರು. 1990ರ ದಶಕದಲ್ಲಿ ಉದಾರೀಕರಣ ಬಂದಾಗಲೂ ರೈತನಿಗೆ ಸ್ವಾಭಿಮಾನದ ಬದುಕು ಸಾಧ್ಯ ಆಗಲಿಲ್ಲ. ಆದ್ದರಿಂದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ-2020 ಜಾರಿಗೆ ತಂದಿದ್ದೇವೆ. ಈ ಎರಡಕ್ಕೂ ಎಪಿಎಂಸಿ ಕಾಯ್ದೆಯಿಂದ ತೊಡಕು ಉಂಟಾಗುತ್ತಿತ್ತು. ಆದ್ದರಿಂದ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದಿದ್ದೇವೆ. ಇದರ ವಿರುದ್ಧ ನನ್ನ ಕಾಂಗ್ರೆಸ್ ಸ್ನೇಹಿತರು ಬೀದಿ ನಾಟಕ ಶುರು ಮಾಡಿದ್ದಾರೆ. ಆ ನಾಟಕದ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಎಪಿಎಂಸಿ ರಾಜ್ಯದ ವಿಷಯವಾಗಿದೆ. ಅದಕ್ಕೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅತಿಹೆಚ್ಚು ಗೌರವ ನೀಡಿದ್ದಾರೆ ಎಂದು ತಿಳಿಸಿದರು.
ಅವರು ಹೇಳಿದಂತೆ ಕೇಳಲು ಸಿದ್ದ-ಡಿಕೆಶಿ ಮತ್ತು ಸಿದ್ದುಗೆ ಸವಾಲು…
ಎಪಿಎಂಸಿಯಲ್ಲಿ ಮತ್ತಷ್ಟು ಸುಧಾರಣೆಗೆ ನಾವು ಬದ್ದರಾಗಿದ್ದೇವೆ. ಸಹಕಾರ ಸಚಿವರಿಗೆ ಕೇಂದ್ರದಿಂದ ಸಂಪೂರ್ಣ ಸಹಕಾರ ಸಿಕ್ಕಿದೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರ ಬಗ್ಗೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಯಾರೇ ಲೋಪ ತೋರಿಸಲಿ. ನಾನು ಅವರು ಹೇಳಿದಂತೆ ಕೇಳಲು ಸಿದ್ದ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸವಾಲು ಹಾಕಿದರು.
ಹಾರಿಕೆ ಸುದ್ದಿಯನ್ನು ಹರಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹಿಂದೆ ಕಪಿಲ್ ಸಿಬಲ್ ಇದನೆಲ್ಲಾ ಶಿಫಾರಸ್ಸು ಮಾಡಿದ್ದರು. ನಿಮ್ಮ ಚುನಾವಣಾ ಪ್ರಣಾಳಿಕೆಯಲಿ ಇದು ಇದೆ. ನೀವು ಜನರ ಹಾದಿ ತಪ್ಪಿಸುವ ಭ್ರಮೆಯಲ್ಲಿದ್ದಾರೆ. ಕೀಳು ಮಟ್ಟದ ಶಬ್ದಗಳನ್ನು ನಾನು ಬಳಸುವುದಿಲ್ಲ. ಬಳಸುವುದಾದರೆ ಡಿಕ್ಸನರಿಯಲ್ಲಿ ಸಾಕಷ್ಟು ಪದಗಳಿವೆ ಎಂದು ಸದಾನಂದಗೌಡ ಕಿಡಿಕಾರಿದರು.
ನಿಮಗೆ ಮಾಡಲು ಏನೂ ಕೆಲಸ ಇಲ್ಲದೇ ಇದ್ದರೆ ಮಾಸ್ಕ್ ಹಾಕಿಕೊಂಡು ಮನೆಯಲ್ಲಿ ಕುಳಿತುಕೊಳ್ಳಿ…
ರೈತರ ಅನುಕೂಲಕ್ಕಾಗಿ ನಾವು ಹೊಸ ಕಾನೂನು ತಂದಿದ್ದೇವೆ. ಕಾಂಗ್ರೆಸ್ಗೆ ನಿನ್ನೆ ಹೇಳಿದ್ದು ಇವತ್ತಿಗೆ ಮರೆತು ಹೋಗಿರುತ್ತೆ. ಇವತ್ತು ಮಾತನಾಡಿದ್ದು ನಾಳೆಗೆ ಮರೆತು ಹೋಗಿರುತ್ತೆ. ನಿಮಗೆ ಮಾಡಲು ಏನೂ ಕೆಲಸ ಇಲ್ಲದೇ ಇದ್ದರೆ ಮಾಸ್ಕ್ ಹಾಕಿಕೊಂಡು ಮನೆಯಲ್ಲಿ ಕುಳಿತುಕೊಳ್ಳಿ. ಮಾತನಾಡುವುದನ್ನು ಕಡಿಮೆ ಮಾಡಿ. ರೈತರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಚಾಳಿ ಕೋವಿಡ್ ರೀತಿಯಲ್ಲಿ ರೈತರಿಗೆ ಹರುಡುವುದು ತಪ್ಪುತ್ತದೆ. ಸ್ಯಾನಟೈಸ್ ಹಾಕಿಕೊಂಡು ಸ್ವಚ್ಛ ಮಾಡಿಕೊಳ್ಳಿ. ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೂಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಸೇರಿ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
Key words: Union Minister- DV Sadananda Gowda -improvement –APMC-outrage- Congress