ಬಸ್ ಪ್ರಯಾಣ ದರ ಏರಿಕೆ: ಗ್ಯಾರಂಟಿ ಸಂತೋಷದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿಲ್ಲ- ಕೇಂದ್ರ ಸಚಿವ ಹೆಚ್.ಡಿಕೆ

ಬೆಂಗಳೂರು, ಜನವರಿ,3,2024 (www.justkannada.in): ರಾಜ್ಯ ಕಾಂಗ್ರೆಸ್ ಸರಕಾರ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು,  ಅಧಿಕಾರಕ್ಕೆ ಬಂದಾಗಿನಿಂದ ಈ ಸರಕಾರ ಜನರ ಮೇಲೆ ಬರೆ ಎಳೆಯುವುದು, ಅದನ್ನು ಜನರೂ ಭರಿಸಿಕೊಂಡು ಹೋಗುವುದು ಮಾಮೂಲಿ ಆಗಿಬಿಟ್ಟಿದೆ ಎಂದು ಹರಿಹಾಯ್ದರು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  ಈ ರಾಜ್ಯದಲ್ಲಿ ಸರಕಾರ ಎನ್ನುವುದು ಇದೆಯಾ? ಇದನ್ನು ಸರಕಾರ ಎಂದು ಕರೆಯುತ್ತಾರಾ? ಈ ಸರಕಾರ ಬಂದಾಗಿನಿಂದ ಬರೀ ಬೆಲೆ ಏರಿಕೆ ಮಾಡುವುದೇ ಆಗಿದೆ ಎಂದು ಅವರು ಕಿಡಿಕಾರಿದರು.

ನಮ್ಮ ರಾಜ್ಯದಲ್ಲಿ ದರ ಏರಿಕೆ, ಬೆಲೆ ಏರಿಕೆ ಎನ್ನುವುದು ಅಚ್ಚರಿಯ ವಿಷಯ ಅಲ್ಲ. ಸರಕಾರ ಪ್ರಯಾಣ ದರವನ್ನು ಶೇಕಡಾ 15ರಷ್ಟು ಏರಿಕೆ ಮಾಡಿ ಜನರ ಮೇಲೆ ದೊಡ್ಡ ಬರೆ ಹಾಕಿದೆ. ಜನರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೂ ಅಭ್ಯಾಸವಾಗಿ ಹೋಗಿದೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸಿ ಮೂರನೇ ದಿನ ಮರೆತು ಹೋಗಿ ಪ್ರಯಾಣ ದರ ಏರಿಕೆಗೇ ಅಡ್ಜೆಸ್ಟ್ ಆಗುತ್ತಾರೆ. ಇದು ನೈಜ ಪರಿಸ್ಥಿತಿ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಸಂತೋಷದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿಲ್ಲ:

ಇದೇ ಕಾಂಗ್ರೆಸ್ ಸರಕಾರ ಡಿಸೇಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿತ್ತು. ಜನರು ಪ್ರತಿಭಟನೆ ಮಾಡಿದರೆ? ಇಲ್ಲ, ಅದಕ್ಕೆ ಅಡ್ಜೆಸ್ಟ್ ಆದರು. ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿದರು. ಗೈಡ್ ಲೈನ್ಸ್ ವ್ಯಾಲ್ಯೂ, ಮದ್ಯದ ದರವನ್ನು ಏರಿಕೆ ಮಾಡಿದರು. ಹಾಲಿನ ದರವನ್ನು ಏರಿಕೆ ಮಾಡುತ್ತಾರಂತೆ. ಈಗ ನೀರಿನ ದರವೂ ಏರಿಕೆ ಆಗುತ್ತದೆ ಎನ್ನುವ ಮಾಹಿತಿ ಬರುತ್ತಿದೆ. ಎಲ್ಲಾ ದರಗಳನ್ನು ಸರಕಾರ ಏರಿಕೆ ಮಾಡುತ್ತಿದೆ. ಆದರೆ, ಗ್ಯಾರಂಟಿ ಸಂತೋಷದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿಲ್ಲ, ಪ್ರತಿಭಟನೆ ಮಾಡುತ್ತಿಲ್ಲ. ಬೆಲೆ ಏರಿಕೆಗೆ ಜನರ ಸಮ್ಮತಿ ಇದೆ ಎಂದು ಸರಕಾರ ಭಾವಿಸಿದಂತಿದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಹೊಸ ವರ್ಷದಲ್ಲಿ ರಾಜ್ಯ ಸರಕಾರ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ ಘೋಷಣೆ ಮಾಡಬೇಕಿತ್ತು. ಆದರೆ, ಬೆಲೆ ಏರಿಕೆ ಘೋಷಣೆ ಮಾಡಿದೆ. ಬೆಲೆ  ಏರಿಕೆಗೆ ವರ್ಷಪೂರ್ತಿ ತಯಾರಾಗಿ ಎಂದು ಸರ್ಕಾರ ಜನರಿಗೆ ಸಂದೇಶ ಕೊಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿಕೆ ಲೇವಡಿ ಮಾಡಿದರು.

ಅನಿವಾರ್ಯ ಇದ್ದಾಗ ಮಾತ್ರ ಬೆಲೆ ಏರಿಕೆ ಮಾಡುವುದನ್ನು ನೋಡಿದ್ದೇವೆ. ಹಿಂದಿನ ಸರಕಾರಗಳ ಅವಧಿಯಲ್ಲಿ ಅನಿವಾರ್ಯವಿದ್ದಾಗ ಬೆಲೆ ಏರಿಕೆ ಮಾಡುವುದು, ಕಡಿಮೆ ಮಾಡುವುದು  ಸಾಮಾನ್ಯ. ಆದರೆ, ಇವರು ಮಾಡಿರುವ ತಪ್ಪಿಗೆ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ. ಎಲ್ಲಾ ಸಮಸ್ಯೆಗಳನ್ನೂ ಸರಕಾರವೇ ಮೈ ಮೇಲೆ ಎಳೆದುಕೊಂಡಿದೆ ಎಂದು ಅವರು ಟೀಕಿಸಿದರು.

ವಿದ್ಯುತ್ ಇಲಾಖೆ ಏನಾಗುತ್ತದೋ?

ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬೆಲೆ ಏರಿಕೆ ಮಾಡಲಾಗುತ್ತಿದೆ. ವಿದ್ಯುತ್ ಇಲಾಖೆ ಏನಾಗುತ್ತದೋ ನೋಡಬೇಕು. ಸರಕಾರದ ಅಸಮರ್ಪಕ ನಿರ್ವಹಣೆಯಿಂದ ಇಲಾಖೆ ಹಾಳಾಗುತ್ತಿದೆ. ಗ್ಯಾರಂಟಿಗಳಲ್ಲಿ ಯುವನಿಧಿ ಯೋಜನೆ ಮಾಡಿದ್ದಾರೆ. ಇದುವರೆಗೆ ಎಷ್ಟು ಯುವ ಜನರಿಗೆ ಹಣ ಹೋಗಿದೆ. ಈ ಸರಕಾರ ಸ್ವೇಚ್ಚಾಚ್ಚರವಾಗಿ ಹಣ ಖರ್ಚು ಮಾಡುತ್ತಿದೆ. ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜನರು ಇದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್ ಡಿಕೆ ಕಿವಿಮಾತು ಹೇಳಿದರು.

ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಸರಕಾರ. ಈ‌ ಸರಕಾರ ಬಂದ ದಿನದಿಂದ ಇದೇ ನಡೆಯುತ್ತಿದೆ. ಹೀಗೆ ಹೇಳುತ್ತಾ ಹೋದರೆ ಬಹಳಷ್ಟು ಹೇಳಬಹುದು. ಸಂಕ್ರಾಂತಿ ಕಳೆಯಲಿ, ಆಮೇಲೆ ಈ ಸರಕಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

Key words: Bus fare, hike, Union Minister, HDK