ನವದೆಹಲಿ,ಜನವರಿ,21,2025 (www.justkannada.in): ರಾಜ್ಯದ ಕೊಬ್ಬರಿ ಮತ್ತು ಅಡಿಕೆ ಬೆಳೆಗಾರರು ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಹತ್ವದ ಮಾತುಕತೆ ನಡೆಸಿದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಪುತ್ರರಿಬ್ಬರ ವಿವಾಹಕ್ಕೆ ತಮ್ಮ ಧರ್ಮಪತ್ನಿ ಚೌಹಾಣ್ ಅವರೊಂದಿಗೆ ಮಂಗಳವಾರ ಬೆಳಗ್ಗೆ ಬೃಹತ್ ಕೈಗಾರಿಕೆ ಸಚಿವಾಲಯಕ್ಕೆ ಆಗಮಿಸಿ ಸಚಿವ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಆಮಂತ್ರಣ ನೀಡಿದರು. ಇದೇ ವೇಳೆ ಸಚಿವರಿಬ್ಬರು ಕರ್ನಾಟಕ ಸೇರಿದಂತೆ ರಾಷ್ಟ್ರದ ಕೃಷಿ ಕ್ಷೇತ್ರದ ಆಗುಹೋಗುಗಳು, ರೈತರ ಕುಂದುಕೊರತೆಗಳ ಬಗ್ಗೆ ಮಾತುಕತೆ ನಡೆಸಿದರು.
ಅಡಿಕೆಗೆ ಬರುತ್ತಿರುವ ರೋಗಗಳ ಪರಿಹಾರಕ್ಕೆ ₹67 ಕೋಟಿಗಳನ್ನು ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರು ಘೋಷಣೆ ಮಾಡಿದ್ದು, ಆ ಬಗ್ಗೆ ಕುಮಾರಸ್ವಾಮಿ ಕೃಷಿ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಅಗತ್ಯ ಮಾರುಕಟ್ಟೆ ಸೌಲಭ್ಯದ ಕೊರತೆ ಹಾಗೂ ಬೆಳೆ ತೆಗೆಯುವ ಬಗ್ಗೆ ಸವಾಲು ಎದುರಿಸುವ ರೈತರಿಗೆ ಸಹಾಯ ಹಸ್ತದ ಬೇಕಿದೆ. ಈ ನಿಟ್ಟಿನಲ್ಲಿ ತಾವು ನೀಡಿರುವ ಭರವಸೆ ರೈತರಲ್ಲಿ ಹರ್ಷ ಮೂಡಿಸಿದೆ ಎಂದು ಕುಮಾರಸ್ವಾಮಿ ಅವರು ಚೌಹಾಣ್ ಅವರಿಗೆ ಹೇಳಿದರು.
ಕರ್ನಾಟಕದ ತೆಂಗು ಬೆಳೆಗಾರರು ಎದುರಿಸುತ್ತಿರುವ ಕಠಿಣ ಸವಾಲುಗಳ ಬಗ್ಗೆ ಕೃಷಿ ಸಚಿವರ ಗಮನ ಸೆಳೆದ ಹೆಚ್ ಡಿ ಕುಮಾರಸ್ವಾಮಿ ಅವರು, ತೆಂಗು ಬೆಳೆಗಾರರ ಸಂಕಷ್ಟ ಪರಿಹಾರ ಮಾಡುವ ನಿಟ್ಟಿನಲ್ಲಿ ತಮ್ಮ ಕಡೆಯಿಂದ ದೊಡ್ಡ ಉಪಕ್ರಮ ಆಗಬೇಕಿದೆ. ಈ ನಿಟ್ಟಿನಲ್ಲಿ ತಾವು ರಾಜ್ಯದಲ್ಲಿ ತೆಂಗು ಬೆಳೆಗಾರರ ಸಮಾವೇಶ ನಡೆಸಿ ಅವರ ಸಂಕಷ್ಟಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಸಮಾವೇಶ ನಡೆಸುವ ಕುಮಾರಸ್ವಾಮಿ ಅವರ ಸಲಹೆಗೆ ತಕ್ಷಣವೇ ಸ್ಪಂದಿಸಿದ ಶಿವರಾಜ್ ಸಿಂಗ್ ಚೌಹಾಣ್, ಇದು ಬಹಳ ಒಳ್ಳೆಯ ಆಲೋಚನೆ. ಬೆಳೆಗಾರರು ತಮ್ಮೆಲ್ಲ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಿ. ಅನಂತರ ಪರಿಹಾರೋಪಾಯಗಳನ್ನು ಕಂಡುಕೊಳ್ಳೋಣ ಎಂದು ಚೌಹಾಣ್ ಅವರು ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹೇಳಿದರು.
ದುಬಾರಿಗೆ ಸಾಗಾಣಿಕೆ ವೆಚ್ಚವೇ ತೆಂಗು ಬೆಳೆಗಾರರಿಗೆ ದೊಡ್ಡ ಸಮಸ್ಯೆ ಆಗಿದೆ. ರೈತನ ಬಹುತೇಕ ಆದಾಯ ಸಾಗಾಣಿಕೆಗೆ ವ್ಯಯವಾಗುತ್ತಿದೆ. ಅವರಿಗೆ ನ್ಯಾಯಯುತ ಬೆಲೆ ದಕ್ಕಿಸಿಕೊಡುವುದರ ಜೊತೆಗೆ ಸಾಗಾಣಿಕೆ ವ್ಯವಸ್ಥೆಯನ್ನು ರೈತರ ಕೈಗೆಟುಕುವಂತೆ ಮಾಡುವುದು ಅತ್ಯಗತ್ಯವಾಗಿದೆ. ಇದಕ್ಕೆ ಕೃಷಿ ಸಚಿವಾಲಯದ ನೆರವು ಅಗತ್ಯವಿದೆ ಎಂದು ಕುಮಾರಸ್ವಾಮಿ ಅವರು ಕೃಷಿ ಸಚಿವರನ್ನು ಕೋರಿದರು. ಈ ಮನವಿಗೂ ಕೃಷಿ ಸಚಿವರು ಸ್ಪಂದಿಸಿದರು.
ಕೃಷಿ ಉತ್ಪನ್ನಗಳ ಸರಪಳಿಯಿಂದ ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವ ಅಗತ್ಯತೆಯ ಬಗ್ಗೆಯೂ ಇಬ್ಬರೂ ಕೇಂದ್ರ ಸಚಿವರು ಚರ್ಚೆ ನಡೆಸಿದರು.
ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಉಪಟಳ ಮೆರೆ ಮೀರಿದೆ. ಕೇಂದ್ರ ಸರ್ಕಾರದಿಂದ ಎಷ್ಟೇ ಅನುಕೂಲರ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ರೈತರ ಸಂಕಷ್ಟ ಬಗೆಹರಿದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಉತ್ತಮ ಬೆಲೆ ಖಾತರಿ ಜತೆಗೆ, ಬೆಳೆಗಳ ಅತ್ಯುತ್ತಮ ದಾಸ್ತಾನು ಖಾತರಿಯನ್ನು ರೈತರಿಗೆ ಕೊಡಬೇಕಿದೆ ಎಂಬ ಬಗ್ಗೆ ಸಚಿವರಿಬ್ಬರೂ ಚರ್ಚಿಸಿದರು.
ಫಲಾನುಭವಿಗಳಿಗೆ ಹಣ ನೇರ ವರ್ಗಾವಣೆ (ಡಿಬಿಟಿ) ಮೂಲಕ ರಸಗೊಬ್ಬರ ಸಬ್ಸಿಡಿಯನ್ನು ಸಕಾಲಕ್ಕೆ ತಲುಪಿಸುವ ಮಹತ್ವವನ್ನು ಕುಮಾರಸ್ವಾಮಿ ಅವರು ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ; ವಿಳಂಬವಿಲ್ಲದೆ ಇತರೆ ಸಹಾಯಧನವನ್ನು ನೇರವಾಗಿ ರೈತರಿಗೆ ತಲುಪಿಸುವುದು, ಅಧಿಕಾರಶಾಹಿಯ ಅನಗತ್ಯ ಹಸ್ತಕ್ಷೇಪದಿಂದ ಅವರನ್ನು ರಕ್ಷಿಸುವುದು ಸೇರಿದಂತೆ ಹಲವಾರು ಪ್ರಮುಖ ಅಂಶಗಳ ಬಗ್ಗೆ ಕುಮಾರಸ್ವಾಮಿ ಅವರು ಕೃಷಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
Key words: Union Agriculture Minister, meets, HDK, Discusses