ಮದ್ರಾಸ್ ಹೈಕೋರ್ಟ್ ನಲ್ಲಿ ಕ್ಷಮೆಯಾಚಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು, ಸೆಪ್ಟೆಂಬರ್,4,2024 (www.justkannada.in):  ಬೆಂಗಳೂರಿನ ರಾಮೇಶ್ವರಂ ಕೆಫೆ ಪ್ರಕರಣ ಸಂಬಂಧ ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಉಗ್ರ ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿ ತಮಿಳುನಾಡು ಸರ್ಕಾರ ಸೇರಿದಂತೆ ಅಲ್ಲಿನ ಜನಪ್ರತಿನಿಧಿಗಳು ವಾಗ್ದಾಳಿ ನಡೆಸಿದ್ದರು.

ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಆಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಅವರು ಕೆಫೆ ಸ್ಫೋಟ ಪ್ರಕರಣದ ಉಗ್ರ ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದ ಎಂದು ಹೇಳಿಕೆ ನೀಡಿದ್ದರು.

ಈ ಸಂಬಂಧ ಮದುರೈ ಪೊಲೀಸರು ಶೋಭಾ ಕರಂದ್ಲಾಜೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ, ಶೋಭಾ ಕರಂದ್ಲಾಜೆ ಅವರು, ತಮ್ಮ ವಿರುದ್ಧದ  ಪ್ರಕರಣ ರದ್ದುಗೊಳಿಸಲು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಇದೀಗ ನ್ಯಾ. ಜಿ. ಜಯಚಂದ್ರನ್ ನೇತೃತ್ವದ ನ್ಯಾಯಪೀಠದೆದುರು ಪ್ರಮಾಣ ಪತ್ರ ಸಲ್ಲಿಸಿರುವ ಶೋಭಾ ಕರಂದ್ಲಾಜೆ ತಮಿಳುನಾಡಿನ ಜನರ ಕ್ಷಮೆಯಾಚಿಸಿದ್ದಾರೆ.  ನಾನು ತಮಿಳುನಾಡು ಜನರ ಕುರಿತು ನೀಡಿದ್ದ ಹೇಳಿಕೆಯಲ್ಲಿ ಯಾರದೇ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶವಿರಲಿಲ್ಲ. ನಾನು ಈಗಾಗಲೇ ನನ್ನ ಹೇಳಿಕೆಯನ್ನು ಹಿಂಪಡೆದಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈಗಾಗಲೇ ಕ್ಷಮಾಪಣೆ ಕೋರಿದ್ದೇನೆ ಎಂದೂ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನ ಇತಿಹಾಸ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಗೌರವ ಇದೆ. ತಮಿಳುನಾಡಿನ ಜನರ ಬಗ್ಗೆ ಅಪಾರ ಗೌರವ ಇದೆ. ತಮಿಳುನಾಡಿನ ಜನರ ಭಾವನೆಗೆ ಧಕ್ಕೆ ತರುವ ಯಾವುದೇ ಉದ್ದೇಶ ಇರಲಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದಕ್ಕೆ ತಮಿಳುನಾಡು ಜನರಿಗೆ ಕ್ಷಮೆ ಯಾಚಿಸುವೆ ಎಂದಿದ್ದಾರೆ.

Key words: Union Minister, Shobha Karandlaje, apologized, Madras High Court