ಬೆಂಗಳೂರು ನಗರದಂತೆ ಮೈಸೂರಿಗೂ ರೈಲ್ವೆ ಸೌಲಭ್ಯ- ಕೇಂದ್ರ ಸಚಿವ ವಿ.ಸೋಮಣ್ಣ ಭರವಸೆ

ಮೈಸೂರು,ಸೆಪ್ಟಂಬರ್,13,2024 (www.justkannada.in): ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಇನ್ನು ಮುಂದೆ ಮೈಸೂರು ನಗರಕ್ಕೂ ಎಲ್ಲಾ ರೀತಿಯ ರೈಲ್ವೆ ಸೌಲಭ್ಯಗಳು ದೊರಕಲಿದೆ ಎಂದು ರೈಲ್ವೆ ರಾಜ್ಯ ಸಚಿವರು ಹಾಗೂ ಜಲ ಶಕ್ತಿ ಸಚಿವರಾದ ವಿ.ಸೋಮಣ್ಣ ಅವರು ಭರವಸೆ ನೀಡಿದರು.

ಇಂದು ಮೈಸೂರು ವಿಭಾಗೀಯ ರೈಲ್ವೆ ನಿರ್ವಹಣಾ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ಜವಾಬ್ದಾರಿಯನ್ನು ಹೊಂದಿರುವ ರೈಲ್ವೆ ಇಲಾಖೆಯು ರಾಷ್ಟ್ರದ ವಿಕಾಸದ ಎಂಜಿನ್ ನಂತೆ ಕಾರ್ಯನಿರ್ವಹಿಸುತ್ತದೆ. ಹೊರ ರಾಷ್ಟ್ರದವರು ವಿಕಸಿತ ಭಾರತದ ರೈಲ್ವೆ ಇಲಾಖೆಯ ಅಭಿವೃದ್ಧಿಯ ಬಗ್ಗೆ ಮಾತನಾಡುವಂತೆ ಮಾಡಬೇಕು ಎಂದರು.

ಪ್ರತಿ ವರ್ಷವು 124 ಕಿ.ಮೀ ರೈಲ್ವೆ ಲೈನ್ಸ್ ಗಳು ಹೆಚ್ಚಾಳವಾಗುತ್ತಿದೆ. 333 ಕೋಟಿ ವೆಚ್ಚದಲ್ಲಿ ಮೈಸೂರು ವಿಭಾಗದ 15 ರೈಲ್ವೆ ಸ್ಟೇಷನ್‌ ಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದ್ದು, 2025ಕ್ಕೆ ಈ ಯೋಜನೆಯು ಪೂರ್ಣಗೊಳ್ಳಲಿದೆ. ಪ್ರಸ್ತುತ ಮೈಸೂರಿನಲ್ಲಿ 80 ರೈಲುಗಳ ಸಂಚಾರವಿದ್ದು, ಮುಂಬರುವ ದಿನಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆಯಿದೆ ಎಂದು ಮಾಹಿತಿ ನೀಡಿದರು.

ಮೈಸೂರು-ಕುಶಾಲನಗರ ನಡುವೆ 89 ಕಿ.ಮೀ ರೈಲು ಮಾರ್ಗ ನಿರ್ಮಾಣ ಹಾಗೂ ಚಾಮರಾಜನಗರದಲ್ಲಿ ಸುಮಾರು 142 ಕಿ.ಮೀ ನ ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸ್ಥಳೀಯ ಜನರಿಗೆ ಹಾಗೂ ಪ್ರಯಾಣಿಕರಿಗೆ ಸಹಾಯವಾಗುತ್ತದೆ. ಅಲ್ಲದೆ ಹಲವಾರು ಪ್ರದೇಶಗಳಿಗೆ ರೈಲಿನ ಸೌಲಭ್ಯ ಸಿಕ್ಕಂತಾಗುತ್ತದೆ ಎಂದರು.

ಬಡವರು ಮತ್ತು ಜನಸಾಮಾನ್ಯರಿಗೆ ಸಹಾಯವಾಗುವಂತೆ ತುಮಕೂರು, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಮೆಮೊ ರೈಲುಗಳನ್ನು ತರಲಾಗಿದ್ದು, ಇದೇ ತಿಂಗಳ 27 ನೇ ತಾರೀಕಿನಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸರ್ಕ್ಯುಲರ್ ರೈಲು ಯೋಜನೆಯಲ್ಲಿ ಮೈಸೂರು ಜಿಲ್ಲೆಯು ಒಳಪಟ್ಟಿದ್ದು, ಇದರಿಂದ ಬೆಂಗಳೂರು ಹಾಗೂ ಮೈಸೂರಿಗೆ ಮತ್ತು ಮೆಟ್ರೋಗೆ ನೇರ ಸಂಪರ್ಕವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ ಹೆಚ್ಚು ಸರಕು ಸಾಗಾಣಿಕೆಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೂ ಅನುವು ಮಾಡಿಕೊಡಲಾಗುವುದು ಎಂದರು.

ರೈಲುಗಳಲ್ಲಿ ಮಹಿಳಾ ಬೋಗಿಗಳನ್ನು ಹೆಚ್ಚಿಸುವ ಸಂಬoಧ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ರೈಲುಗಳಿಗೆ ಅಳವಡಿಸುವ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಇದರ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹಾಗೂ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕಟಿ.ಎಸ್.ಶ್ರೀವತ್ಸ ಉಪಸ್ಥಿತರಿದ್ದರು.

Key words: Union Minister, V. Somanna, railway facility, Mysore