ಮೈಸೂರು, ಮಾ.೦೨,೨೦೨೫: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಸಂಘದ (ಅಲೂಮ್ನಿ ಅಸೋಸಿಯೇಷನ್ ) ಸರ್ವ ಸದಸ್ಯರ ವಾರ್ಷಿಕ ಸಭೆ ಭಾನುವಾರ ಬೆಳಗ್ಗೆ ಸಂಘದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ನಗರದ ಸರಸ್ವತಿ ಪುರಂ ಅಗ್ನಿ ಶಾಮಕ ದಳ ಕಚೇರಿ ಎದುರು ಇರುವಅಲೂಮ್ನಿ ಅಸೋಸಿಯೇಷನ್ ನಲ್ಲಿ ಸಂಘದ ಅಧ್ಯಕ, ವಿಶ್ರಾಂತ ಕುಲಪತಿ ಪ್ರೊ. ಎಸ್ ಎನ್ ಹೆಗ್ಡೆ, ಉಪಾಧ್ಯಕ್ಷ ಪ್ರೊ.ಕೆ.ಎಸ್ ರಂಗಪ್ಪ ಹಾಗೂ ವಿಶ್ರಾಂತ ಕುಲಪತಿಗಳಾದ ಪ್ರೊ.ರಾಮೇಗೌಡ, ಪ್ರೊ.ಹೇಮಂತ್ ಕುಮಾರ್ , ಪ್ರೊ.ತರೀನ್ , ಸಿಂಡಿಕೇಟ್ ಸದಸ್ಯ ಚಂದ್ರಶೇಖರ್ ಹಾಗೂ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಯಿತು.
ಸಭೆಯ ಬಳಿಕ ಸಂಘದ ಉಪಾಧ್ಯಕ್ಷ, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಸುದ್ದಿ ಗೋಷ್ಠಿ ನಡೆಸಿ ಸಭೆಯ ಬಗ್ಗೆ ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿಗಳ ಸಂಘ 1999 ರಿಂದಲೂ ಇದೆ. ಆದರೆ ಅದು ನಿಷ್ಕ್ರಿಯಗೊಂಡಿತ್ತು. ಈ ಹಿಂದೆ ನಾನು ಮೈಸೂರು ವಿ.ವಿ ಗೆ ಕುಲಪತಿಯಾಗಿ ನೇಮಕಗೊಂಡ ಬಳಿಕ ಸಂಘವನ್ನು ಮತ್ತೆ ಪುನರ್ರಚನೆ ಮಾಡಿ ಸಕ್ರಿಯೆಗೊಳಿಸಿದ್ದೆ.
ಟ್ರಸ್ಟ್ ಸ್ಥಾಪನೆ:
ಬೇರೆ ಬೇರೆ ದೇಶಗಳಲ್ಲಿ ಹಳೇ ವಿದ್ಯಾರ್ಥಿ ಸಂಘಟನೆಗಳಿಂದಲೇ ಕೆಲವೊಂದು ವಿ.ವಿಗಳೇ ಸ್ಥಾಪನೆ ಆಗಿವೆ. ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರದ ಪ್ರೋತ್ಸಾಹ ಇಲ್ಲದೆ ವಿಶ್ವ ವಿದ್ಯಾನಿಲಯಗಳು ರೋಗಗ್ರಸ್ತವಾಗಿ ನಡೆಯುತ್ತಿವೆ. ಉನ್ನತ ಶಿಕ್ಷಣ ಎನ್ನುವುದು ನೆನೆಗುದಿಗೆ ಬಿದ್ದಿದೆ. ಸೈನ್ಸ್ ಅಂಡ್ ಟೆಕ್ನಾಲಜೀಸ್ ನೆನೆಗುದಿಗೆ ಬಿದ್ದಿದೆ. ಹಾಗಾಗಿ ಇಂತ ಪರಿಸ್ಥಿತಿಯಲ್ಲಿ ನಾವೆಲ್ಲ ಒಂದು ಪರಿಹಾರವನ್ನ ಕಂಡುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಸ್ಥಾಪಿಸಿ ವಿದೇಶದಲ್ಲಿ ನೆಲೆಸಿರುವ ಮೈಸೂರು ವಿವಿ ಹಳೇ ವಿದ್ಯಾರ್ಥಿಗಳ ದೇಣಿಯ ಹಣವನ್ನು ಸದುಪಯೋಗ ಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುವ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಈ ಎಲ್ಲಾ ಅಂಶಗಳ ಬಗ್ಗೆ ಕೂಲಂಕುಷವಾಗೊ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲು ಇಂದು ಹಳೆ ವಿದ್ಯಾರ್ಥಿ ಸಂಘದ ಸಭೆ ಕರೆದಿದ್ದೆವು. ಜತೆಗೆ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಬೇಕಿದೆ. ಈಗಾಗಲೇ ಮೂರು ವರ್ಷಗಳ ಅವಧಿ ಮುಗಿದಿದೆ. ನಮ್ಮಲ್ಲೇ ಇರುವ ಒಬ್ಬ ಸದಸ್ಯ ಚುನಾವಣೆ ನಡೆಸಲು ಆಕ್ಷೇಪ ಎತ್ತಿ ಕೋರ್ಟ್ ಮೊರೆ ಹೋಗಿದ್ದಾರೆ . ನಮ್ಮಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಶೀಘ್ರದಲ್ಲೇ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತದೆ. ನಮ್ಮಲ್ಲಿ 13 ಜನ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗುತ್ತದೆ. ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುತ್ತದೆ ಎಂದು ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಮಾಹಿತಿ ನೀಡಿದರು.
ಒಂದು ಕುಟುಂಬ :
ಮೈಸೂರು ವಿವಿ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರು. ಈ ಸಂಘದ ಉದ್ದೇಶಕ್ಕೆ ಪೂರಕವಾಗಿ ಪ್ರತಿಷ್ಠೆ ಬದಿಗಿಟ್ಟು ಎಲ್ಲರು ಕಾರ್ಯ ನಿರ್ವಹಿಸಬೇಕು. ಆ ಮೂಲಕ ವಿವಿಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಸಲುವಾಗಿ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಮೂರು ವಿವಿಗೆ ಕುಲಪತಿಗಳಾಗಿ ಅನುಭವ ಹೊಂದಿರುವ ಪ್ರೊ.ತರೀನ್ ಸಭೆಯಲ್ಲಿ ಕಿವಿಮಾತು ಹೇಳಿದರು.
key words: UNIVERSITY OF MYSORE, “ALUMNI ASSOCIATION”, UOM
UNIVERSITY OF MYSORE “ALUMNI ASSOCIATION” MEETING SUCCESSFULY HELD