ಬೆಂಗಳೂರು, ಜುಲೈ 18, 2023 (www.justkannada.in): ದೇಶವು ಇಂದು ಎರಡು ಪ್ರಮುಖ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಅದು ರಾಷ್ಟ್ರದ ಜನರ ಭವಿಷ್ಯವನ್ನು ಮಾರ್ಗದರ್ಶನ ಮಾಡುವ ಗುರಿಯನ್ನು ಹೊಂದಿದೆ.
ದೇಶದ ಸಿಲಿಕಾನ್ ಸಿಟಿ ಮತ್ತು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದಾದ ಬೆಂಗಳೂರಲ್ಲಿ ನಡೆಯುತ್ತಿರುವ ವಿಪಕ್ಷಗಳ ನಾಯಕರ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ 24 ವಿರೋಧ ಪಕ್ಷಗಳ ನಾಯಕರ ಸಮಾವೇಶ ದೇಶಕ್ಕೆ ಸಮರ್ಥ ಮತ್ತು ಶಕ್ತಿಯುತ ರಾಜಕೀಯ ಪರ್ಯಾಯ ರೂಪಿಸುವ ಜತೆಗೆ ಹತ್ತು ವರ್ಷಗಳ ಮೋದಿ ಆಡಳಿತವನ್ನು ಕೊನೆಗಾಣಿಸುವ ಪ್ರಯತ್ನಕ್ಕೆ ಕೈಹಾಕಿದೆ.
ರಾಷ್ಟ್ರ ರಾಜಧಾನಿ ದೆಹಲಿ ಎನ್‌ಡಿಎ ಮಿತ್ರಪಕ್ಷಗಳ ಒಗ್ಗಟ್ಟು ಪ್ರದರ್ಶನಕ್ಕೆ ಆತಿಥ್ಯ ವಹಿಸುತ್ತಿದೆ. ಕಮಲ ಪಕ್ಷದ ಈ ಪ್ರಯತ್ನ ಎನ್‌ಡಿಎ ಬಲವನ್ನು ತೋರಿಸಲು ಮಾತ್ರವಲ್ಲದೆ ಅಧಿಕಾರ ಉಳಿಸಿಕೊಳ್ಳಲು ಹೊಸ ಮಿತ್ರರನ್ನು ಸ್ವಾಗತಿಸಿ ತನ್ನ ನೆಲೆಯನ್ನು ವಿಸ್ತರಿಸಯವ ಪ್ರಯತ್ನವಾಗಿದೆ.
ರಾಜಕೀಯ ಶಕ್ತಿ ಪ್ರದರ್ಶನ ಎಂದೇ ಬಿಂಬಿತವಾಗಿರುವ ಎರಡೂ ಸಭೆಗಳು ಆಯಾ ಕಡೆಯಿಂದ ತೀವ್ರ ಟೀಕೆಗೆ ಗುರಿಯಾಗಿವೆ. ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನವನ್ನು ಬಿಜೆಪಿ ಅಧಿಕಾರಕ್ಕಾಗಿ ಪೈಪೋಟಿ ಎಂದು ಬಣ್ಣಿಸಿದರೆ, ವಿರೋಧ ಪಕ್ಷದ ನಾಯಕರು ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿಪಕ್ಷಗಳ ಎರಡನೇ ಸಭೆಯು 2024 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಲಿನ ಗುಂಡಿ ತೋಡಲು ನಡೆಸುತ್ತಿರುವ ಪ್ರಯತ್ನವಾಗಿದೆ.
ವಿರೋಧ ಪಕ್ಷದ ನಾಯಕರಾದ ವಿಶೇಷವಾಗಿ ಬಿಹಾರ ಸಿಎಂ ನಿತೀಶ್‌ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕರ್ನಾಟಕ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯ ವಿಜಯದ ಕಹಳೆಯನ್ನು ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪುನರಾವರ್ತಿಸಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ.
ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ಹೀನಾಯ ಸೋಲುಣಿಸಿದೆ. ಹಿಂದೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಗೆ ಹೀನಾಯವಾಗಿ ಸೋಲುಣಿಸಿತ್ತು. ಪಶ್ಚಿಮ ಬಂಗಾಳ, ತಮಿಳುನಾಡು, ರಾಜಸ್ಥಾನ, ಕೇರಳ ಚುನಾವಣೆಗಳಲ್ಲಿ ಸೋತ ನಂತರ ಕಮಲ ಪಕ್ಷ ಸಹಜವಾಗಿಯೇ ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಎಚ್ಚರದಿಂದಿರುವಂತೆ ಮಾಡಿದೆ.
ಈ ವರ್ಷ ಕರ್ನಾಟಕದಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಮೋಘ ಗೆಲುವು ಕಾಂಗ್ರೆಸ್ ಮುಕ್ತ ಭಾರತವನ್ನು ಸಂಘಟಿಸುತ್ತಿರುವ ಬಿಜೆಪಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಜಯವು ವಾಸ್ತವಿಕವಾಗಿ ಬಿಜೆಪಿಯನ್ನು ದಕ್ಷಿಣ ಭಾರತದಿಂದ ಹೊರಹಾಕಿತ್ತು. ಹೀಗಾಗಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಮತ್ತು ಮೋದಿ ಸಣ್ಣ ಪಕ್ಷಗಳನ್ನು ಸೆಳೆಯುವ ಮೂಲಕ ಎನ್‌ಡಿಎ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಜನಸೇನಾ ಸಂಸ್ಥಾಪಕ ಮತ್ತು ನಟ ಪವನ್ ಕಲ್ಯಾಣ್. ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವರು ಇತರರು ಎನ್‌ಡಿಎ ಸೆಳೆತಕ್ಕೆ ಸಿಕ್ಕಿದ್ದಾರೆ.
ದೇಶದ ರಾಜಕೀಯ ವಲಯದಲ್ಲಿ ಸಮ್ಮಿಶ್ರ ರಾಜಕಾರಣ ಹೊಸ ವಿದ್ಯಮಾನವೇನಲ್ಲ. ರಾಷ್ಟ್ರವು 1970ರಿಂದಲೇ ಇದಕ್ಕೆ ಸಾಕ್ಷಿಯಾಗಿದೆ. ಭಾರತ ಯುಪಿಎ ಮತ್ತು ಎನ್’ಡಿಎ ಜೊತೆಗೆ ನ್ಯಾಷನಲ್ ಫ್ರಂಟ್, ಯುನೈಟೆಡ್ ಫ್ರಂಟ್ ರಾಜಕೀಯವನ್ನು ನೋಡಿದೆ. ಈ ನಡುವೆ ಈ ಬಿರುಸಿನ ರಾಜಕೀಯ ಬೆಳವಣಿಗೆಯ ನಡುವೆಯೇ ಜೆಡಿಎಸ್ ನಲುಗಿದಂತಿದೆ. ಸದ್ಯಕ್ಕೆ ದೇವೇಗೌಡರ ಪಕ್ಷ ಯುಪಿಎ ಅಥವಾ ಎನ್‌ಡಿಎ ಭಾಗವಾಗಿಲ್ಲ.
- ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು
English Summary: The country is witnessing two major political show of strength today, that are aimed at guiding the destiny of its people vis-a-vis, the nation.