ಮೈಸೂರು,ಡಿಸೆಂಬರ್,15,2020(www.justkannada.in): ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವಿಗೆ ಹಿರಿಯ ಸಾಹಿತಿ ಪ್ರೊಫೆಸರ್ ಕೆ. ಎಸ್. ಭಗವಾನ್ ವಿರೋಧ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದಲ್ಲಿ ಗೋಮಾಂಸ ರಫ್ತು ಮಾಡುವವರಲ್ಲಿ ಮೇಲ್ವರ್ಗದ ಬ್ರಾಹ್ಮಣರೇ ಹೆಚ್ಚಾಗಿದ್ದಾರೆ. ಯಜ್ಞ ಯಾಗಾದಿಗಳಿಗೂ ಗೋವುಗಳನ್ನು ಕೊಲ್ಲಲಾಗುತ್ತಿತ್ತು, ಬ್ರಾಹ್ಮಣರು ಕೂಡಾ ದನದ ಮಾಂಸ ತಿನ್ನುತ್ತಿದ್ದರೆಂದು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ರಾಜ್ಯದಲ್ಲಿ ಯಾವುದೇ ಚರ್ಚೆಯನ್ನು ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ಹೇಳಿದ್ದಾರೆ.
ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಪ್ರೊ. ಕೆ.ಎಸ್ ಭಗವಾನ್, ರೈತರು ಅಶಕ್ತ ಜಾನುವಾರುಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರು ಅಶಕ್ತ ಜಾನುವಾರುಗಳನ್ನು ಸಾಕಬೇಕಾಗುತ್ತದೆ. ಇದರಿಂದ ರೈತರಿಗೆ ಹೊರೆಯಾಗಿ ಪರಿಣಮಿಸುತ್ತದೆ. ರೈತರು ತಮ್ಮ ಜಾನುವಾರುಗಳೊಂದಿಗೆ ಯಾವುದೇ ರೀತಿಯ ಭಾವುಕತೆ ಇಟ್ಟುಕೊಂಡಿರುವುದಿಲ್ಲ. ಅಮೇರಿಕಾದಲ್ಲಿ ಕೊಲ್ಲಲೆಂದೇ ದನಗಳನ್ನು ಸಾಕುತ್ತಾರೆ. ರಾಜ್ಯದಲ್ಲಿ ಯಾವುದೇ ಚರ್ಚೆಯನ್ನು ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ಮೊದಲಿನ ನಿಯಮ, ಪದ್ದತಿಯೇ ಮುಂದುವರಿಯಬೇಕು ಎಂದು ಆಗ್ರಹಿಸಿದರು.
ಇಂತಹ ಪದವನ್ನು ಶೂದ್ರ ಜನಾಂಗ ಒಪ್ಪಿಕೊಳ್ಳಲು ಹೇಗೆ ಸಾಧ್ಯ…?
ಬ್ರಾಹ್ಮಣರನ್ನು ಬ್ರಾಹ್ಮಣರೆಂದರೆ, ಕ್ಷತ್ರಿಯರನ್ನು ಕ್ಷತ್ರಿಯರೆಂದರೆ, ವೈಶ್ಯರನ್ನು ವೈಶರೆಂದರೆ ಸಂತಸಪಡುವಂತೆ ಶೂದ್ರರನ್ನು ಶೂದ್ರರೆಂದರೆ ಸಂತಸಪಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಭೋಪಾಲ್ ನ ಸಂಸದೆ ಪ್ರಜ್ಞಾ ಠಾಕೂರ್ ವಿರುದ್ದ ವಾಗ್ದಾಳಿ ನಡೆಸಿದ ಪ್ರೊಫೆಸರ್ ಕೆ. ಎಸ್ ಭಗವಾನ್, ಪ್ರಜ್ಞಾ ಠಾಕೂರ್ ಗೆ ಹಿಂದೂ ಧರ್ಮದ ಬಗ್ಗೆಯೇ ಸಂಪೂರ್ಣ ಅರಿವಿಲ್ಲ. ಹಿಂದೂ ಧರ್ಮವೆಂದರೆ ಕೇವಲ ಬ್ರಾಹ್ಮಣರ ಧರ್ಮವೇ ಹೊರತು, ಬೇರೆಯವರ ಧರ್ಮವಲ್ಲ. ಶೂದ್ರರೆಂದರೆ ಬ್ರಾಹ್ಮಣರ ಗುಲಾಮರು. ಶೂದ್ರರೆಂದರೆ ಸೂಳೆಯ ಮಗ ಅಥವಾ ಹಾದರಕ್ಕೆ ಹುಟ್ಟಿದವ ಎಂದು ಮನುಸ್ಮೃತಿಯಲ್ಲಿ ಉಲ್ಲೆಖವಾಗಿದೆ. ಇಂತಹ ಪದವನ್ನು ಶೂದ್ರ ಜನಾಂಗ ಒಪ್ಪಿಕೊಳ್ಳಲು ಹೇಗೆ ಸಾಧ್ಯ..? ಎಂದು ಪ್ರಶ್ನಿಸಿದರು.
ಹಾಗೆಯೇ ಜನಿವಾರ ಹಾಕಿಕೊಳ್ಳದವರೆಲ್ಲರೂ ಶೂದ್ರರು ಎಂದು ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ. ಅದರ ಪ್ರಕಾರ ಒಕ್ಕಲಿಗರು, ಲಿಂಗಾಯತರು, ಕುರುಬರು, ಉಪ್ಪಾರರು, ನಾಯಕರು ಹಾಗು ದಲಿತರೆಲ್ಲರೂ ಶೂದ್ರರೇ ಆಗಿದ್ದಾರೆ. ದೇಶದ ಜನಸಂಖ್ಯೆಯ ಶೇಕಡ 95% ರಷ್ಟು ಮಂದಿ ಶೂದ್ರರು ಇದ್ದಾರೆ. ಮನುಸ್ಮೃತಿಯಲ್ಲಿ ಉಲ್ಲೇಖವಾಗಿರುವುದನ್ನು ನಾನು ಹೇಳುತ್ತಿದ್ದೇನೆ. ಇದು ಮಾಧ್ಯಮಗಳಲ್ಲಿ ಪ್ರಚಾರವಾದರೆ ನಾನೇ ಈ ಮಾತನ್ನು ಹೇಳಿದ್ದೇನೆಂದುಕೊಂಡು ನನ್ನನ್ನು ಕೊಲ್ಲುವುದಾಗಿ, ಹೊಡೆಯುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಬೆದರಿಕೆ ಬಂದರೆ ನೀವು ನನ್ನ ಬೆಂಬಲಕ್ಕೆ, ಸಹಾಯಕ್ಕೆ ಬರಬೇಕು ಎಂದು ಮಾಧ್ಯಮ ಪ್ರತಿನಿಧಿಗಳನ್ನು ಕೋರುತ್ತೇನೆ ಎಂದು ಕೆ.ಎಸ್ ಭಗವಾನ್ ಹೇಳಿದರು.
ಪಂಚಾಂಗ ಜ್ಯೋತಿಷ್ಯ, ದೇವರು ಎಂಬುದೆಲ್ಲಾ ಕೇವಲ ಮೌಢ ಹಾಗೂ ಕಂದಾಚಾರ….
ಪಂಚಾಗ, ಜ್ಯೋತಿಷ್ಯ, ದೇವರು ಎಂಬುದೆಲ್ಲಾ ಕೇವಲ ಮೌಢ್ಯ ಹಾಗೂ ಕಂದಾಚಾರವಾಗಿದೆ. ಕೊರೊನಾ ಬರುತ್ತದೆ ಎಂದು ಯಾವ ಪಂಚಾಗವೂ ಹೇಳಲಿಲ್ಲ. ಯಾವ ಜ್ಯೋತಿಷಿಯೂ ಕೊರೋನಾ ಬರುತ್ತದೆಂದು ಹೇಳಲಿಲ್ಲ. ಕೊರೋನಾದಿಂದ ಜನರನ್ನ ರಕ್ಷಿಸಲು ಯಾವ ದೇವರು ಬರಲಿಲ್ಲ. ಕೊರೋನಾ ಬರುತ್ತಿದ್ದಂತೆ ದೇವಾಲಯ ಚರ್ಚ್, ಮಸೀದಿಗಳ ಬಾಗಿಲು ಬಂದ್ ಮಾಡಲಾಯಿತು.ಇಷ್ಟಾದರೂ ಯಾವುದೇ ದೇವರು ಕೊರೊನಾದಿಂದ ಜನರನ್ನು ರಕ್ಷಣೆ ಮಾಡಲು ಬರಲಿಲ್ಲ ಎಂದು ಟೀಕಿಸಿದರು.
Key words: Upper-class- Brahmins – most -exported -beef –country-mysore-KS Bhagavan