ವಾಷಿಂಗ್ಟನ್,ಜನವರಿ,07,2021(www.justkannada.in) : ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ನಾಯಕ ಹಾಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಕೋಪಗೊಂಡಿರುವ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ನಡುವೆ ಉಂಟಾದ ಗಲಾಟೆಯಲ್ಲಿ ಓರ್ವ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯ ಕಾಲಮಾನ 4.15ರ ಸುಮಾರಿಗೆ ಟ್ರಂಪ್ ಬೆಂಬಲಿಗರ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯ ಭಾಗವಾಗಿದ್ದ ಮಹಿಳೆಯೊಬ್ಬಳು ಕ್ಯಾಪಿಟಲ್ ಕಟ್ಟಡದ ಒಳಗಡೆ ಗುಂಡಿನ ಚಕಮಕಿಯ ನಂತರ ರಕ್ತಸ್ರಾವ ಬಿದ್ದಿರುವ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ.
ಭುಜಕ್ಕೆ ಗುಂಡೇಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡವನ್ನು ಮುತ್ತಿಗೆ ಹಾಕಿದರೆ, ಇನ್ನೊಂದೆಡೆ ಡೆಮೋಕ್ರೆಟಿಕ್ ಪಕ್ಷದ ಜೋ ಬೈಡೆನ್ ಗೆಲುವನ್ನು ರದ್ದುಗೊಳಿಸುವ ಅಧ್ಯಕ್ಷರ ಬೇಡಿಕೆಯನ್ನು ತಮ್ಮದೇ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಮೈಕ್ ಪೆನ್ಸ್ ನಿರಾಕರಿಸಿದರು ಮತ್ತು ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಒತ್ತಾಯಿಸಿರುವ ಟ್ರಂಪ್ ಬೆಂಬಲಿಗರ ನಡೆಯನ್ನು ಖಂಡಿಸಿದ್ದಾರೆ.
ಪ್ರತಿಭಟನಾಕಾರರು ಕ್ಯಾಪಿಟಲ್ ಕಟ್ಟಡ ಸುತ್ತ ಇದ್ದ ಬ್ಯಾರಿಕೇಡ್ಗಳನ್ನು ಉರುಳಿಸಿದರು. ಬಳಿಕ ಕ್ಯಾಪಿಟಲ್ ಮೈದಾನದಲ್ಲಿ ಪೊಲೀಸರೊಂದಿಗೆ ಘರ್ಷಣೆಗಿಳಿದರು. ನವೆಂಬರ್ 3ರ ಚುನಾವಣೆಯಲ್ಲಿ ಟ್ರಂಪ್ ವಿರುದ್ಧದ ಬೈಡೆನ್ ವಿಜಯವನ್ನು ಔಪಚಾರಿಕವಾಗಿ ಪ್ರಮಾಣೀಕರಿಸಲು ಶಾಸಕರು ಕ್ಯಾಪಿಟಲ್ ಕಟ್ಟಡ ಒಳಗೆ ಹೋಗುವಾಗ ಟ್ರಂಪ್ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ.
ಪ್ರಧಾನಿ ನರೇಂದ್ರ ಮೋದಿ ಬೇಸರ
ಗಲಭೆ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿ ನೋಡಿ ಬೇಸರವಾಯಿತು. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
key words : US Capital-building-Donald Trump-supporters-protest …!