ಅಹಮದಾಬಾದ್,ಫೆ,24,2020(www.justkannada.in): ನರೇಂದ್ರ ಮೋದಿ ನನ್ನ ನಿಜವಾದ ಸ್ನೇಹಿತ. ಭಯೋತ್ಪಾದನೆ ವಿರುದ್ದ ಅಮೇರಿಕಾ ಮತ್ತು ಭಾರತ ಜಂಟಿ ಹೋರಾಟ ಮಾಡುತ್ತವೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಜತೆ ಇಂದು ಶಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಥ್ ನೀಡಿದರು. ನಂತರ ಅಹಮದಾಬಾದ್ ನಲ್ಲಿರುವ ಮೊಟೆರಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ವಿಶ್ವದಲ್ಲಿ 8 ಸಾವಿರ ಮೈಲಿ ಸುತ್ತಿ ಇಲ್ಲಿಗೆ ಬಂದು ಇಳಿದಿದ್ದೇನೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ನನಗೆ ಸ್ವಾಗತ ಕೋರಿದ್ದೀರಿ. ಅದಕ್ಕಾಗಿ ಭಾರತೀಯರಿಗೆ ನಾನು ಅಬಾರಿಯಾಗಿರುತ್ತೇನೆ. ನೀವು ನನಗೆ ನೀಡಿದ ಸ್ವಾಗತ ಅಮೇರಿಕನ್ನರಿಗೆ ನೀಡಿದ ಗೌರವ. ಅಮೇರಿಕಾ ಎಂದೆಂದೂ ಭಾರತವನ್ನ ಗೌರವಿಸುತ್ತೇ ಪ್ರೀತಿಸುತ್ತೆ. ಭಾರತೀಯರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ನುಡಿದರು.
ಹಾಗೆಯೇ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿಹೊಗಳಿದ ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿ ನನ್ನ ನಿಜವಾದ ಸ್ನೇಹಿತ ಎಂದು ಹೇಳಲು ಹೆಮ್ಮೆಯಾಗುತ್ತಿದೆ. 70 ವರ್ಷದಲ್ಲಿ ಭಾರತ ಆರ್ಥಿಕವಾಗಿ ಬಲಿಷ್ಟವಾಗಿದೆ.ಪ್ರಧಾನಿ ಮೋದಿ ಯಶಸ್ವಿನಾಯಕರಾಗಿದ್ದಾರೆ. ಮೋದಿ ದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿದ್ದಾರೆ. ಮೋದಿ ನಡೆದಾಡುವ ಕಥೆಯಾಗಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಲು ಮೋದಿ ಶ್ರಮಿಸುತ್ತಿದ್ದಾರೆ. ಹಳ್ಳಿಗಳಿಗೆ ಇಂಟರ್ ನೆಟ್, ವಿದ್ಯುತ್ ಸಂಪರ್ಕ, 7 ಕೋಟಿ ಜನರಿಗೆ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಭಾರತದಲ್ಲಿ 27 ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ. ಬಡತನ ನಿರುದ್ಯೋಗ ನಿರ್ಮೂಲನೆಗೆ ಮೋದಿ ಯತ್ನಿಸುತ್ತಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಬಡತನ ನಿರ್ಮೂಲನೆ ಮಾಡಲಿದ್ದಾರೆ ಎಂದು ಹೇಳಿದರು.
ಪಾಕಿಸ್ತಾನಕ್ಕೆ ದೊಡ್ಡಣ್ಣ ಎಚ್ಚರಿಕೆ..
ವಿಶ್ವದಾದ್ಯಂತ ಮನುಷ್ಯ ಜೀವನಕ್ಕೆ ಮಾರಕವಾಗಿ ಪರಿಣಮಿಸಿರುವ ಭಯೋತ್ಪಾದನೆ ವಿರುದ್ಧ ಭಾರತ- ಅಮೆರಿಕಾ ಜಂಟಿಯಾಗಿ ಹೋರಾಟ ನಡೆಸಲಿವೆ. ಇಸ್ಲಾಮಿಕ್ ಉಗ್ರರ ಬೆದರಿಕೆಯಿಂದ ನಾಗರಿಕನ್ನು ರಕ್ಷಿಸಲು ಉಭಯ ದೇಶಗಳು ಬದ್ದವಾಗಿವೆ. ತಮ್ಮ ಆಳ್ವಿಕೆಯಲ್ಲಿ ಐಎಸ್ ಐಎಸ್ ಉಗ್ರರ ಮಟ್ಟಹಾಕಲು ಅಮೆರಿಕಾ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಪ್ರಸ್ತುತ ಶೇ. 100 ರಷ್ಟು ಐಎಸ್ ಐಸ್ ಉಗ್ರರು ನಾಶವಾಗಿದ್ದಾರೆ. ಇಸ್ಲಾಮಿಕ್ ಉಗ್ರವಾದ ವಿರುದ್ದ ಅಮೇರಿಕಾ-ಭಾರತ ಜಂಟಿ ಹೋರಾಟ ಮಾಡುತ್ತದೆ. ಪಾಕ್ ನಲ್ಲಿರುವ ಉಗ್ರರನ್ನ ಮಟ್ಟ ಹಾಕಲು ಒತ್ತಡ ಹೇರಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು.
ರಕ್ಷಣೆಯಲ್ಲಿ ಸಹಕಾರವನ್ನು ಮುಂದುವರೆಸಲಾಗುವುದು, ಭಾರತಕ್ಕೆ ಅತ್ಯುತ್ತಮ ಮಿಲಿಟರಿ ಉಪಕರಣಗಳನ್ನು ಪೂರೈಸಲು ಅಮೆರಿಕಾ ಎದುರು ನೋಡುತ್ತಿದೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು, 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಉಪಕರಣಗಳ ಒಪ್ಪಂದಕ್ಕೆ ನಾಳೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಟ್ರಂಪ್ ತಿಳಿಸಿದರು.
ಶೋಲೆ, ಡಿಡಿಎಲ್ ಜೆ, ಬಂಗಾರದಂತಹ ಬಾಲಿವುಡ್ ಸಿನಿಮಾವನ್ನು ಇಡೀ ವಿಶ್ವವೇ ನೋಡಿ ಖುಷಿಪಟ್ಟಿದೆ. ಸಚಿನ್ ತೆಂಡೊಲ್ಕರ್, ವಿರಾಟ್ ಕೊಹ್ಲಿಯಂತಹ ಅದ್ಬುತ ಕ್ರಿಕೆಟ್ ಆಟಗಾರರು ಭಾರತದಲ್ಲಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದರು.
Key words: US-India -Joint – Against –Terrorism-Donald Trump- praising- Prime Minister- Modi.