ಹೊಸದಿಲ್ಲಿ,ಅಕ್ಟೋಬರ್,1,2020(www.justkannada.in): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಾಲ್ವರು ಕಾಮುಕರಿಂದ ದಲಿತ ಯುವತಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕುಟುಂಬಸ್ಥರನ್ನ ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ಉತ್ತರಪ್ರದೇಶದ ಹತ್ರಾಸ್ ನತ್ತ ಕಾರ್ಯಕರ್ತರ ಜತೆ ತೆರಳುತ್ತಿದ್ದ ಕೈ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪೊಲೀಸರು ತಡೆಹಿಡಿದರು. ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಇಬ್ಬರನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಮಯದಲ್ಲಿ ರಾಹುಲ್ ಗಾಂಧಿ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಈ ಕುರಿತು ಕೇಂದ್ರ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ನಮ್ಮನ್ನ ಪೊಲೀಸರು ತಡೆದು ಲಾಠಿಚಾರ್ಜ್ ಮಾಡಿದ್ದಾರೆ. ನನ್ನನ್ನ ಕೆಳಗೆ ತಳ್ಳಿದ್ದಾರೆ ಎಂದು ಆರೋಪಿಸಿದರು. ಹಾಗಯೇ ದೇಶದಲ್ಲಿ ಮೋದಿ ಮಾತ್ರ ಓಡಾಡಲು ಅವಕಾಶವಿದ್ಯಾ..? ಜನಸಾಮಾನ್ಯರು ಓಡಾಡಲು ಅವಕಾಶವಿಲ್ಲವೇ..? ಎಂದು ಪ್ರಶ್ನಿಸಿದರು. ನಮ್ಮ ವಾಹವನ್ನು ತಡೆಯಲಾಯಿತು. ಹೀಗಾಗಿ ಕಾಲ್ನಡಿಗೆಯಲ್ಲಿ ಹೊರಟೆವು. ಆದರೂ ನಮ್ಮನ್ನ ಪೊಲೀಸರು ತಡೆದಿದ್ದಾರೆ ಎಂದು ಕಿಡಿಕಾರಿದರು.
ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಮೇವು ತರಲು ಹೋಗಿದ್ದ ಯುವತಿಯನ್ನ ನಾಲ್ವರು ಕಾಮುಕರು ಎಳೆದೊಯ್ದು ಅತ್ಯಾಚಾರವೆಸಗಿದ್ದರು. ಬಳಿಕ ಬೆನ್ನುಮೂಳೆ ಮುರಿದು ಹಾಕಿದ್ದರು ಎನ್ನಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತ ಯುವತಿ ಕಳೆದ ಎರಡು ದಿನದ ಹಿಂದೆ ಸಾವನ್ನಪ್ಪಿದ್ದು ಉತ್ತರಪ್ರದೇಶ ಪೊಲೀಸರೇ ಅಂದು ರಾತ್ರಿ 2.30ರ ಸುಮಾರಿಗೆ ಸಂತ್ರಸ್ತ ಯುವತಿಯ ಅಂತ್ಯಕ್ರಿಯೆ ನಡೆಸಿದ್ದರು.
Key words: uttar Pradesh-Gang rape -murder case –congress leader-Rahul Gandhi -Priyanka Gandhi -detained – police