ಮೈಸೂರು, 22 ಮೇ 2022 (www.justkannada.in): ಮೂರೇ ತಿಂಗಳಲ್ಲಿ ಕನ್ನಡ ಕಲಿತ ಉತ್ತರಾಖಂಡದ ವಿದ್ಯಾರ್ಥಿನಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು ೫೧೪ ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದಾಳೆ.
ಮೈಸೂರಿನ ನಿವಾಸಿಯಾಗಿರುವ ಈಶಾ ಫೌಂಡೇಶನ್ ಸ್ವಯಂ ಸೇವಕರಾದ ಪ್ರೊಘಿ.ತಾರಾಮೂರ್ತಿ ಅವರ ಕಾಳಜಿ ಪರಿಣಾಮ ಉತ್ತರಾಖಂಡದ ಕಲ್ಪನಾ ಎಂಬ ಹುಡುಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೇರ್ಗಡೆಯಾಗಿ ಇದೀಗ ಐಎಎಸ್ ಮಾಡುವ ಕನಸು ಇಟ್ಟುಕೊಂಡಿದ್ದಾಳೆ. ಹಿಂದಿ, ಗಡ್ವಾಲಿ ಭಾಷೆ ಗೊತ್ತಿದ್ದ ಕಲ್ಪನಾಗೆ ಕನ್ನಡ ಭಾಷೆ ಬಗ್ಗೆ ಅರಿವು ಸಹ ಇರಲಿಲ್ಲಘಿ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಬೇಕೆಂಬ ಛಲದಿಂದ ಮೂರು ತಿಂಗಳಲ್ಲಿ ಕನ್ನಡ ಕಲಿತು ಕನ್ನಡ ಮಾಧ್ಯಮದಲ್ಲೇ ಪರೀಕ್ಷೆ ಬರೆದು ಇದೀಗ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.
ಯಾರಿದು ಕಲ್ಪನಾ?: ಉತ್ತರಾಖಂಡ ಜೋಶಿಮಠ ನಗರದ ಉರ್ಗಮ್ ಕಣಿವೆ ನಿವಾಸಿಯಾದ ರವೀಂದ್ರ ಸಿಂಗ್ ಮತ್ತು ಆಶಾ ದಂಪತಿ ಪುತ್ರಿಯೇ ಕಲ್ಪನಾ. ಈಕೆಗೆ ಮೂರು ವರ್ಷ ಇದ್ದಾಗ ತಾಯಿ ಅನಾರೋಗ್ಯದಿಂದ ಮೃತಪಡುತ್ತಾರೆ. ತಂದೆ ಮತ್ತೊಂದು ಮದುವೆಯಾದ ಪರಿಣಾಮ ಕಲ್ಪನಾ ತಾತ ರಾಮ್‌ಸಿಂಗ್ ಆಶ್ರಯದಲ್ಲೇ ಬೆಳೆಯುತ್ತಾಳೆ. ಈ ನಡುವೆ ಟಿಬಿ ಕಾಯಿಲೆಗೆ ತುತ್ತಾದ ಕಲ್ಪನಾ ತನ್ನ ಎರಡು ಕಣ್ಣುಗಳನ್ನು ಕಳೆದುಕೊಳ್ಳುತ್ತಾಳೆ. ಉರ್ಗಮ್ ಕಣಿವೆಯಲ್ಲೇ ೩ನೇ ತರಗತಿವರೆಗೂ ವ್ಯಾಸಂಗ ಮಾಡಿ ನಂತರ ಓದು ಮೊಟಕುಗೊಳಿಸುತ್ತಾಳೆ. ಆದರೆ, ತಾತಾ ರಾಮ್‌ಸಿಂಗ್‌ಗೆ ಮೊಮ್ಮಗಳು ಓದಿ ದೊಡ್ಡ ವ್ಯಕ್ತಿಯಾಗಬೇಕೆಂಬ ಕನಸು. ಈ ಕಾರಣದಿಂದ ಮೈಸೂರಿನ ತಾರಾಮೂರ್ತಿ ಅವರ ಮೊರೆ ಹೋಗುತ್ತಾರೆ. ಆ ನಂತರ ಆಗಿದ್ದೆಲ್ಲಾ ಇತಿಹಾಸ.
ಕಲ್ಪನಾ ಸಿಕ್ಕಿದ್ದು ಹೇಗೆ?: ಮೈಸೂರಿನ ತಾರಾಮೂರ್ತಿ ಹಲವು ವರ್ಷಗಳ ಕಾಲ ಅಧ್ಯಾಪಕರಾಗಿದ್ದವರು. ಅಲ್ಲದೆ, ದೇಶದ ವಿವಿಧ ರಾಜ್ಯಗಳ ವೈವಿಧ್ಯಮಯ ಜೀವನವನ್ನು ಅರಿಯುವ ಉದ್ದೇಶದಿಂದ ಪ್ರವಾಸಕ್ಕೆ ಹೋಗುವ ಹವ್ಯಾಸವೂ ಅವರಿಗಿದೆ. ಹೀಗೆ ೪ ವರ್ಷದ ಹಿಂದೆ ಉತ್ತರಾಖಂಡ ಜೋಶಿಮಠದಲ್ಲೇ ವಾಸ್ತವ್ಯ ಹೂಡಿದ್ದಾರೆ. ರಾಮ್‌ಸಿಂಗ್ ಮನೆಯಲ್ಲೇ ಬಾಡಿಗೆ ಇದ್ದರು. ತಾರಾಮೂರ್ತಿ ಅವರು ವಿದ್ಯಾವಂತರಾದ ಕಾರಣ ತಾತ ರಾಮ್‌ಸಿಂಗ್ ಮೊಮ್ಮಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಕೃಪೆ: ನಾಗರಾಜ್ ನವೀಮನೆ ಮೈಸೂರು, ವಿಜಯ ಕರ್ನಾಟಕ