ಮಂಡ್ಯ ಸೆಪ್ಟಂಬರ್,27,2024 (www.justkannada.in): ಇದೇ ಮೊದಲ ಬಾರಿಗೆ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ 29 ರಂದು ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಯಾವುದೇ ತರಹದ ಲೋಪವಾಗದಂತೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ತಹಶೀಲ್ದಾರರು, ಕಾಲೇಜು ಪ್ರಾಂಶುಪಾಲರು ಹಾಗೂ ಪರೀಕ್ಷ ಪರಿವೀಕ್ಷಕರ ಸಭೆ ನಡೆಸಿ ಮಾತನಾಡಿದರು
ಸೆಪ್ಟೆಂಬರ್ 29ರಂದು ನಡೆಯಲಿರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆಯಲ್ಲಿ 12,086 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಂಡ್ಯ -14, ಮದ್ದೂರು-3, ಮಳವಳ್ಳಿ -2, ನಾಗಮಂಗಲ-2, ಪಾಂಡವಪುರ-2, ಕೃಷ್ಣರಾಜಪೇಟೆ-2 ರಂತೆ ಜಿಲ್ಲೆಯಲ್ಲಿ ಒಟ್ಟು 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪರೀಕ್ಷೆಗೆ ತಡವಾಗಿ ಬಂದ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸುವಂತಿಲ್ಲ ಹಾಗೂ ಪರೀಕ್ಷೆ ನಡೆಯುವಾಗ ಅರ್ಧಕ್ಕೆ ಅಭ್ಯರ್ಥಿಗಳನ್ನು ಕೊಠಡಿಯಿಂದ ಹೊರಗೆ ಕಳುಹಿಸುವಂತಿಲ್ಲ ಎಂದು ತಿಳಿಸಿದರು.
ಪರೀಕ್ಷಾ ಪರಿವೀಕ್ಷಕರು ಎಚ್ಚರಿಕೆಯಿಂದ ಪ್ರಶ್ನೆಪತ್ರಿಕೆಯನ್ನು ನೋಡಿಕೊಳ್ಳಬೇಕು, ಪರೀಕ್ಷೆ ಪ್ರಾರಂಭವಾಗುವುದಕ್ಕು ಒಂದು ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಕ್ರಮವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಪ್ರಶ್ನೆ ಪತ್ರಿಕೆಯ ಕವರ್ ತೆರೆದಿಲ್ಲಾ ಎಂದು ನೋಡಿಕೊಳ್ಳಬೇಕು, ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಎಚ್ಚರಿಸಿದರು.
ತ್ರಿಸದಸ್ಯ ಸಮಿತಿಯ ಸದಸ್ಯರು ನಿಗದಿತ ಸಮಯದಲ್ಲಿ ಖಜಾನೆಗೆ ಹಾಜರಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಯ ಗೌಪ್ಯತಾ ಬಂಡಲ್ ಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ವಿತರಿಸುವಂತೆ ತಿಳಿಸಲಾಯಿತು.
ಪರೀಕ್ಷೆಯನ್ನು ಪಾರದರ್ಶಕತೆಯಿಂದ ನಡೆಸುವ ಸಲುವಾಗಿ ಸದರಿ ಪರೀಕ್ಷೆ ನಡೆಯುವ ದಿನಾಂಕಗಳನ್ನು ಜಿಲ್ಲೆಯ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಎ ಗುಂಪಿನ ಅಧಿಕಾರಿಗಳನ್ನು ವೀಕ್ಷಕರನ್ನಾಗಿ (ಸ. ಪ. ಪೂ. ಕಾಲೇಜುಗಳ ಪ್ರಾಂಶುಪಾಲರುಗಳನ್ನು ಒಟ್ಟು 26 ವೀಕ್ಷಕರನ್ನು) ನಿಯೋಜಿಸಲಾಗಿದೆ. ನೇಮಕಗೊಂಡ ವೀಕ್ಷಕರುಗಳ ಪಟ್ಟಿಯನ್ನು ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎಂದರು.
ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ಸುತ್ತಳತೆಯಲ್ಲಿ ಐಪಿಸಿ ಸೆಕ್ಷನ್ 144ನೇ ಕಲಂ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಭ್ಯರ್ಥಿಗಳು ಯಾವುದೇ ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಪೆನ್ ಡ್ರೈವ್ ಗಳು, ಇಯರ್ ಫೋನ್ ಗಳು, ಮೈಕ್ರೋ ಫೋನ್ ಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದರು.
ಅಭ್ಯರ್ಥಿಗಳು ಬ್ಲೂಟೂತ್ ಸಾಧನಗಳನ್ನು ಪರೀಕ್ಷಾ ಕೊಠಡಿಯಲ್ಲಿ ಬಳಸುವುದನ್ನು ತಡೆಯುವ ಸಲುವಾಗಿ ತಲೆಯ ಮೇಲೆ ಫುಲ್ ಶರ್ಟ್, ಶೂ, ಟೋಪಿ ಅಥವಾ ಯಾವುದೇ ವಸ್ತ್ರವನ್ನು ಧರಿಸುವುದನ್ನು, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರವನ್ನು/ ಸಾಧನವನ್ನು ಧರಿಸುವುದನ್ನು ನಿಷೇಧಿಸಿದ್ದು, ಯಾವುದೇ ರೀತಿಯ ಮಾಸ್ಕನ್ನು ಧರಿಸಿದಂತೆ ನೋಡಿಕೊಳ್ಳುವಂತೆ ತಿಳಿಸಲಾಯಿತು.
ಕೆಇಎ ರವರು ನೀಡಿರುವ ಸೂಚನೆಯನುಸಾರ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಜೀನ್ಸ್ ಪ್ಯಾಂಟ್ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಒಂದು ವೇಳೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಲ್ಲಿ ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಒಳಗೆ ಪ್ರವೇಶಿಸಲು ಅನುಮತಿಸಬಾರದೆಂದು ಪರೀಕ್ಷಾ ಕೇಂದ್ರದ ಉಪಮುಖ್ಯ ಅಧೀಕ್ಷಕರುಗಳಿಗೆ ತಿಳಿಸಲಾಯಿತು.
ಮಹಿಳಾ ಅಭ್ಯರ್ಥಿಗಳು ಮಾಂಗಲ್ಯ ಸರ ಹಾಗೂ ಮೂಗುತಿಯನ್ನು ಹೊರತುಪಡಿಸಿ ಇನ್ನಾವುದೇ ಆಭರಣಗಳನ್ನು ಧರಿಸಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳ ಉಪಮುಖ್ಯ ಅಧೀಕ್ಷಕರುಗಳಿಗೆ ಸೂಚಿಸಲಾಯಿತು.
ಪರೀಕ್ಷಾ ಮೇಲ್ವಿಚಾರಕರು ಎಚ್ಚರವಹಿಸಿ ಪರೀಕ್ಷಾ ನಿಯಮಗಳನ್ನು ಪಾಲಿಸುವುದು. ಅಭ್ಯರ್ಥಿಯು ಓಎಂಆರ್ ನಲ್ಲಿ ನೋಂದಣಿ ಸಂಖ್ಯೆ ಮತ್ತು ವರ್ಷವನ್ನು ಸರಿಯಾಗಿ ಬರೆದು ಶೇಡ್ ಮಾಡಿ ಸಹಿ ಮಾಡಿರುವುದನ್ನು ಖಾತರಿಪಡಿಸಿಕೊಂಡು ಓಎಂಆರ್ ನಲ್ಲಿ ಕೊಠಡಿ ಮೇಲ್ವಿಚಾರಕರು ಹಾಗೂ ಅಭ್ಯರ್ಥಿಯು ಸಹಿ ಮಾಡುವಂತೆ ಕ್ರಮ ವಹಿಸಲು ತಿಳಿಸಲಾಯಿತು.
ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಚೆಲುವಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: VA, recruitment, exam, September 29, Mandya