ಬೆಂಗಳೂರು,ಜೂನ್,16,2021(www.justkannada.in): ಮಹಾಮಾರಿ ಕೋವಿಡ್ನಿಂದ ಜೀವ ಕಾಪಾಡುವ ಲಸಿಕೆಯ ಬಗ್ಗೆ ನಡೆಯುತ್ತಿರುವ ರಾಜಕೀಯ ಮೇಲಾಟ ಅತ್ಯಂತ ದುರದೃಷ್ಟಕರ. ಆದರೆ ಡಿಸೆಂಬರ್ ಒಳಗಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರಕಾರ ಲಸಿಕೆ ನೀಡಿಯೇ ನೀಡುತ್ತದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ಅಡ್ವೊಕೇಟ್ಸ್ ಫಾರ್ ʼಗ್ರೀನ್ ಅರ್ಥ್ʼ ಸ್ವಯಂ ಸೇವಾ ಸಂಸ್ಥೆಯು ಬಿಬಿಎಂಪಿ ಜತೆ ಸೇರಿ ವಕೀಲರಿಗೆ ಆಯೋಜಿಸಿದ್ದ ವಿಶೇಷ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿದರು.
ಕೋವಿಡ್ ಮಾರಿಯನ್ನು ನಮ್ಮ ಹತ್ತಿರಕ್ಕೆ ಬರದಂತೆ ತಡೆಯಲು ಇರುವ ಏಕೈಕ ಪರಿಹಾರ ಲಸಿಕೆ ಮಾತ್ರ. ಆದರೆ, ಇದರ ಬಗ್ಗೆ ನಡೆಯುತ್ತಿರುವ ರಾಜಕೀಯ ಅಷ್ಟಿಷ್ಟಲ್ಲ. ಜಾಗತಿಕವಾಗಿ ನಡೆದ ಷಡ್ಯಂತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಿಣಾಮಕಾರಿಯಾಗಿ ಎದುರಿಸಿದರು. ಅದೇ ರೀತಿ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ತಂತ್ರಗಳಿಗೆ ರಾಜ್ಯ ಸರಕಾರ ತಿರುಗೇಟು ಕೊಟ್ಟಿದೆ ಎಂದರು.
ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಲಸಿಕೆಯ ಸಂಶೋಧನೆ, ತಯಾರಿಕೆ ಮತ್ತು ಲಸಿಕೀಕರಣ ಅತ್ಯಂತ ವೇಗವಾಗಿ ಆಗಿದೆ. ಇದನ್ನು ಪ್ರತಿಯೊಬ್ಬರೂ ಗುರುತಿಸಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ಈಗ ಪ್ರತಿಯೊಬ್ಬರೂ ಲಸಿಕೆಯನ್ನು ತಪ್ಪದೇ ಪಡೆಯಬೇಕು. ಜತೆಗೆ, ಕುಟುಂಬದವರಿಗೂ ಕೊಡಿಸಬೇಕು ಹಾಗೂ ನಮ್ಮ ಸುತ್ತಮುತ್ತಲಿನ ಜನರು ಪಡೆಯುವಂತೆ ಪ್ರೋತ್ಸಾಹ ನೀಡಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಹಿರಿಯ ವಕೀಲ ವಿವೇಕ್ ರೆಡ್ಡಿ, ರಾಜ್ಯದ ಸಾಲಿಸಿಟರ್ ಜನರಲ್ ನರಗುಂದ್, ಬಾರ್ ಕೌನ್ಸಿಲ್ ಅಧ್ಯಕ್ಷ ಶ್ರೀನಿವಾಸ ಬಾಬು ಮುಂತಾದವರು ಹಾಜರಿದ್ದರು.
Key words: Vaccination – all people – December-DCM -Ashwath Narayan