ಬೆಂಗಳೂರು,ಜೂನ್,23,2021(www.justkannada.in): ‘ಮರಳಿ ಕಾಲೇಜಿಗೆʼ ಎನ್ನುವ ಘೋಷವಾಕ್ಯದಡಿ ಕಾಲೇಜುಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ. ಹೀಗಾಗಿ, ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲು ಸರಕಾರ ಉದ್ದೇಶಿಸಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳ ವಿತರಣಾ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, 3ನೇ ಅಲೆಯ ಮುನ್ನೆಚ್ಚರಿಕೆಯೂ ಸೇರಿ ಎಲ್ಲ ಅಂಶಗಳನ್ನು ಒಳಗೊಂಡ ವರದಿಯನ್ನು ಡಾ.ದೇವಿಶೆಟ್ಟಿ ನೇತೃತ್ವದ ಸಮಿತಿ ನೀಡಿದೆ. ಮೊದಲು ಕಾಲೇಜುಗಳನ್ನು ತೆರೆಯಿರಿ ಎಂದು ವರದಿ ಶಿಫಾರಸು ಮಾಡಿದೆ. ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಉದ್ದೇಶವಿದೆ ಎಂದರು.
ಕೇಂದ್ರ ಸರಕಾರ ನೀಡುವ ಮಾರ್ಗಸೂಚಿಗೆ ಸರಕಾರ ಕಾಯುತ್ತಿದೆ. ಈಗಾಗಲೇ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡುವ ಕೆಲಸ ಸಾಗಿದೆ. ಅದರಲ್ಲೂ ವಿದ್ಯಾರ್ಥಿಗಳನ್ನು ಆದ್ಯತಾ ಗುಂಪಿಗೆ ಸೇರಿಸಿ ವ್ಯಾಕ್ಸಿನ್ ನೀಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
ಲಸಿಕೆ ಮಾತ್ರ ಪರಿಹಾರ:
ಕೋವಿಡ್ ಡೆಲ್ಟಾ ಪ್ಲಸ್ ಮಾರಿ ರಾಜ್ಯಕ್ಕೆ ಕಾಲಿಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಲಸಿಕೆ ಪಡೆದಿದ್ದರೆ ಯಾವುದೇ ರೂಪಾಂತರಿ ವೈರಸ್ ಬಂದರೂ ತೊಂದರೆ ಆಗುವುದಿಲ್ಲ. ಎಲ್ಲರೂ ಈಗ ಲಸಿಕೆ ಪಡೆಯಬೇಕು. ಅದೊಂದೇ ಪರಿಹಾರ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
Key words: Vaccine -college -students – July- DCM -Ashwath Narayan.