ಮೈಸೂರು,ಜನವರಿ,2,2020(www.justkannada.in): ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಪ್ರಯೋಗ ಮಾಡಲಾಗುತ್ತಿದ್ದು, ಲಸಿಕಾ ಕೇಂದ್ರಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಮೈಸೂರಿನ ಜಯನಗರ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಡ್ರೈರನ್ ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು. 25 ಮಂದಿ ಕೊರೋನಾ ವಾರಿಯರ್ಸ್ ಗೆ ಲಸಿಕೆ ನೀಡುವ ತಾಲೀಮು ಕೋವಿಡ್ ಲಸಿಕೆ ಡ್ರೈ ರನ್ ನಡೆಸಲಾಗುತ್ತಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಕೊರೋನಾ ವ್ಯಾಕ್ಸಿನ್ ಡ್ರೈರನ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಲಸಿಕಾ ಕೇಂದ್ರಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ. 32 ಸಾವಿರ ಮಂದಿ ಕೊರೋನಾ ವಾರಿಯರ್ಸ್ ಇದ್ದು, ಆದ್ಯತೆ ಮೇರೆಗೆ ಇವರಿಗೆ ಲಸಿಕೆ ನೀಡುವಂತೆ ಕೇಂದ್ರದ ನಿರ್ದೇಶನ ಬಂದಿದೆ. ಬಳಿಕ ಸಾಧಕ ಬಾಧಕಗಳನ್ನ ಅನುಸರಿಸಿ ಸಾರ್ವಜನಿಕರಿಗೆ ಲಸಿಕೆ ವಿತರಣೆ ಮಾಡಲಾಗುತ್ತದೆ. ಲಸಿಕೆ ದಾಸ್ತಾನಿಗೆ ಈಗಿರುವ ಕೋಲ್ಡ್ ಸ್ಡೋರೇಜ್ ಬಳಕೆ ಮಾಡಲಾಗುತ್ತದೆ. ಪ್ರತ್ಯೇಕ ಕೋಲ್ಡ್ ಸ್ಟೋರೇಜ್ ಅವಶ್ಯವಿಲ್ಲ ಎಂದು ತಿಳಿಸಿದರು.
ಇನ್ನು ಮಕ್ಕಳು ವಯೋವೃದ್ದರು ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರನ್ನ ಹೊರತುಪಡಿಸಿ ಲಸಿಕೆ ಕೊಡಲಾಗುವುದು. ಸಾರ್ವಜನಿಕರೆಲ್ಲರಿಗೂ ಲಸಿಕೆ ನೀಡಬೇಕೆ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರ ನಿರ್ದೇಶನ ನೀಡಲಿದೆ. ಲಸಿಕೆ ಯಾವ ಪ್ರಮಾಣದಲ್ಲಿ ಪೂರೈಕೆ ಆಗುತ್ತೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಪೂರೈಕೆಯಾದ ಲಸಿಕೆಯನ್ನ ಸಮರ್ಪಕ ವಿತರಣೆಗೆ ಜಿಲ್ಲಾಡಳಿತ ಸಜ್ಜಾಗಿದೆ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.
ಬ್ರಿಟನ್ ಕೊರೋನ ವೈರಸ್ ಸೋಂಕಿತರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿ ರೋಹಿಣಿ ಸಿಂಧೂರಿ, ಈ ಬಗ್ಗೆ ಜಿಲ್ಲಾಡಳಿತಕ್ಕೆ ರಿಪೋರ್ಟ್ ಕುರಿತ ನಿಖರ ಬಂದಿಲ್ಲ. ಒಂದೊಮ್ಮೆ ಪಾಸಿಟೀವ್ ಆಗಿದ್ರೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಬೇಕಾಗಿತ್ತು. ಆ ರೀತಿಯ ಯಾವುದೇ ಸೂಚನೆ ಬಂದಿಲ್ಲದ ಕಾರಣ ಬ್ರಿಟನ್ ವೈರಸ್ ನೆಗೆಟೀವ್ ಇರಬಹುದು ಎಂದು ತಿಳಿಸಿದರು.
Key words: Vaccine trial – health department –staff-mysore-DC Rohini Sindhuri -covid Vaccine- Dry Run.