ಬೆಂಗಳೂರು,ಆಗಸ್ಟ್,25,2023(www.justkannada.in): ಇಂದು ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಅರಿಶಿಣ ಕುಂಕುಮ ಬಾಗಿನ ವಿತರಣೆ ಮಾಡಲಾಗುತ್ತಿದೆ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಬಳೆ, ಅರಿಶಿಣ, ಕುಂಕುಮ ಬಾಗಿನ ವಿತರಣೆ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಬಾಗಿನ ವಿತರಣೆ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರದ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಅರಿಶಿನ ಕುಂಕುಮ ವಿತರಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ಧಾರವಾಡದ ಮರಾಠಾ ಕಾಲನಿಯಲ್ಲಿರುವ ದುರ್ಗದೇವಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮದ ಬಾಗಿನ ನೀಡಲಾಗುತ್ತಿದೆ. ಜಿಲ್ಲೆಯ 880 ದೇವಸ್ಥಾನಗಳಲ್ಲಿ ಬಾಗಿನ ವಿತರಣೆ ಮಾಡಲಾಗುತ್ತಿದೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ ಆರ್ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿ ನಡೆದಿದೆ. ಹಣ್ಣು ಹೂವು, ತರಕಾರಿ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಸಾವಿರಾರು ಜನರು ಇಂದು ಕೆ ಆರ್ ಮಾರ್ಕೆಟ್ನಲ್ಲಿ ಖರೀದಿ ಮಾಡ್ತಿದ್ದಾರೆ.
ಬೆಂಗಳೂರಿನಂತೆ ಮೈಸೂರಲ್ಲೂ ಖರೀದಿ ಭರಾಟೆ ಜೋರಾಗಿದ್ದು ನಿನ್ನೆಯಿಂದಲೇ ಎಲ್ಲ ವಸ್ತುಗಳು ದುಬಾರಿಯಾಗಿದೆ. ಆದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜಾಸಾಮಾಗ್ರಿಗಳು ಹಣ್ಣುಹಂಪಲು, ಹೂಗಳನ್ನ ಕೊಂಡುಕೊಳ್ಳುತ್ತಿದ್ದಾರೆ.
Key words: Varamahalakshmi festival- celebrations –today