ಮೈಸೂರು,ಮೇ,18,2021(www.justkannada.in): ಕೋವಿಡ್ ನಿರ್ವಹಣೆ ಮಾಡಲು ಸರ್ಕಾರ ಸಂಪೂರ್ಣ ವಿಫಲ ಆಗಿದೆ. ಸರ್ಕಾರ ಸಚಿವರು ಯಾವುದೇ ತೊಂದರೆ ಇಲ್ಲದೆ ಓಡಾಡಾಲು ಲಾಕ್ ಡೌನ್ ಮಾಡಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.
ನಗರದ ಹಾರ್ಡಿಂಗ್ ವೃತ್ತದ ಬಳಿ ಏಕಾಂಗಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸರ್ಕಾರಕ್ಕೆ ಗೊತ್ತಿರೋದು ಒಂದೇ.. ಲಾಕ್ ಡೌನ್ ಮಾಡೋದು. ಲಾಕ್ ಡೌನ್ ಗೆ ನನ್ ವಿರೋಧ ಇದೆ. ಇದು ಬಡವರ ಸಾಮಾನ್ಯ ಜನರ ವಿರೋಧಿ. ಸರ್ಕಾರ ಸಚಿವರು ಯಾವುದೇ ತೊಂದರೆ ಇಲ್ಲದೆ ಒಡಾಡಾಲು ಲಾಕ್ ಡೌನ್ ಮಾಡಿದ್ದಾರೆ ಎಂದು ಹರಿಹಾಯ್ದರು.
ಸಿಎಂ ಬಿಎಸ್ ಯಡಿಯೂರಪ್ಪಗೆ ವಿವೇಚನೆ ಇಲ್ಲ. ಪ್ರಾಮಾಣಿಕ ಚಿಂತನೆ ಇಲ್ಲ. ಕ್ಯಾಬಿನೆಟ್ ಸಂಪೂರ್ಣವಾಗಿ ಅವರ ಮಾತು ಕೇಳುತ್ತಿಲ್ಲ. ಯಡಿಯೂರಪ್ಪ ಸರ್ವಾಧಿಕಾರಿ, ಅವರು ಹೇಳಿದ್ದೆ ನಡೆಯಬೇಕು. ಈ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಗುಡುಗಿದ ವಾಟಾಳ್ ನಾಗರಾಜ್, ಸಚಿವ ಸಂಪುಟ ಎಲ್ಲೊಗಿದೆ..?ಸಚಿವರುಗಳು ಎಲ್ಲೊಗಿದ್ದಾರೆ.? ಏನು ಕೆಲಸ ಮಾಡ್ತಾ ಇದ್ದಾರೆ? ಪಾರ್ಲಿಮೆಂಟ್ ಮೆಂಬರ್ ಎಲ್ಲೊಗಿದ್ದಾರೆ.? ಸರ್ಕಾರಕ್ಕೆ ಒಂದು ಚಿಂತನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಲಸಿಕೆ ಎಲ್ಲೊ ಒಂದು ಕಡೆ ಕೊಡೊದು, ಇನ್ನಲ್ಲೊ ಒಂದು ಕಡೆ ಬಿಡೋದು. ಕ್ರಮಬದ್ದವಾಗಿ ಲಸಿಕೆ ನೀಡುತ್ತಿಲ್ಲ. ಲಸಿಕೆಯನ್ನು ಕರ್ನಾಟಕದ ಪ್ರತಿಯೊಬ್ಬ ಪ್ರಜೆಗೂ ಕೊಡಬೇಕು.. ಇದು ಸರ್ಕಾರ ಮಾಡಬೇಕಾದ ಕೆಲಸ. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ. ಇದು ಹುಚ್ಚರ ಸಂತೆಯಾಗಿದೆ. ಯಾರಿಗೂ ವಿವೇಚನೆ, ಪ್ರಾಮಾಣಿಕತೆ ಇಲ್ಲ. ಇವರು ಜನರನ್ನು ಕೊಲ್ಲುತ್ತಿದ್ದಾರೆ. ಆಕ್ಸಿಜನ್ ಇಲ್ಲದೆ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಸರ್ಕಾರವೇ ಜವಾಬ್ದಾರಿ. ಅವರಿಗೆ ಏನಾದರೂ ಪರಿಹಾರ ಕೊಟ್ರಾ .? ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಸತ್ತವರ ಬಗ್ಗೆ ಸರ್ಕಾರ ಪ್ರಾಮಾಣಿಕ ಚಿಂತನೆ ಇಲ್ಲ. ಯಡಿಯೂರಪ್ಪ ಬೇಲಿ ಹಾಕಿಕೊಳ್ಳುವುದು ಬಿಟ್ಟು ಸಚಿವರ ನಿಲ್ಲಿಸಿ ಜನತಾ ಅಹವಾಲು ಕೇಳಬೇಕಿತ್ತು ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
Key words: Vatal Nagaraj- protest – Mysore-against -government.