ಮೈಸೂರು,ಸೆ,1,2019(www.justkannada.in): ನಿರಂತರ ಮಹಾ ಮಳೆಗೆ ರಾಜ್ಯದ ಬಹುಭಾಗ ಕೊಚ್ಚಿಹೋದ ಹಿನ್ನಲೆ ರಾಜ್ಯಕ್ಕೆ 50ಸಾವಿರ ಕೋಟಿ ನೆರೆ ಪರಿಹಾರ ನೀಡುವಂತೆ ಆಗ್ರಹಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನೆರೆ ಸಂತ್ರಸ್ತರಿಗೆ ಹೆಚ್ಚಿನ ಅನುದಾನ ನೀಡಬೇಕು. ರಾಜ್ಯಕ್ಕೆ 50 ಸಾವಿರ ಕೋಟಿ ಅನುದಾನ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಇದೇ ತಿಂಗಳು ರಾಜ್ಯದ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಕೇಂದ್ರದಿಂದ ನೆರೆ ವೀಕ್ಷಣೆಗೆ ತಂಡ ಬಂದು ಹೋಗಿದೆ. ಆದರೂ ಇನ್ನೂ ಅನುನಾದ ಬಿಡುಗಡೆ ಮಾಡಿಲ್ಲ. ಇದರಲ್ಲೆ ತಿಳಿಯುತ್ತದೆ ರಾಜ್ಯವನ್ನ ಕೇಂದ್ರ ಸರ್ಕಾರ ಎಷ್ಟು ಕಡೆಗಣಿಸಿದೆ ಅಂತ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನೀರು ಕೊಟ್ಟಿದ್ದೇವೆ ಎನ್ನುವುದಕ್ಕೆ ಪರಿಹಾರ ನೀಡಿ ಅನ್ನೋದು ಸರಿಯಲ್ಲ…
ತಮಿಳಿನಾಡು ಸರ್ಕಾರ ಪರಿಹಾರ ನೀಡಬೇಕು ಎಂಬ ಎಸ್. ಎಲ್ ಬೈರಪ್ಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ತಮಿಳುನಾಡು ಪರಿಹಾರ ನೀಡಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ. ಈ ಬಗ್ಗೆ ಸರ್ಕಾರ ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ನೀರು ಕೊಟ್ಟಿದ್ದೇವೆ ಎನ್ನುವುದಕ್ಕೆ ಪರಿಹಾರ ನೀಡಿ ಅನ್ನೋದು ಸರಿಯಲ್ಲ. ಎಸ್ ಎಲ್ ಬೈರಪ್ಪ ಜೊತೆ ವಾದ ಮಾಡಲು ನಾನು ಹೋಗುವುದಿಲ್ಲ ಎಂದು ಹೇಳಿದರು.
ಯಾವುದೇ ಕಾರಣಕ್ಕೆ ಟಿಪ್ಪು ಹೆಸರನ್ನ ತೆಗೆದುಹಾಕಬಾರದು.
ಟಿಪ್ಪು ಎಕ್ಸಪ್ರೆಸ್ ಹೆಸರನ್ನು ತೆಗೆದು ಹಾಕುವ ವಿಚಾರ ಸಂಬಂಧ ಯಾವುದೇ ಕಾರಣಕ್ಕೆ ಟಿಪ್ಪು ಹೆಸರನ್ನ ತೆಗೆದುಹಾಕಬಾರದು. ಟಿಪ್ಪು ಈ ದೇಶ ಕಂಡ ಮಹಾನ್ ಹೊರಾಟಗಾರ. ದೇಶಕ್ಕಾಗಿ ತನ್ನ ಎರಡು ಮಕ್ಕಳನ್ನ ಒತ್ತಯಿಟ್ಟ ಮಹಾನ್ ವ್ಯಕ್ತಿ. ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಮೊದಲು ಶಂಕುಸ್ಥಾಪನೆ ಮಾಡಿದ ವ್ಯಕ್ತಿ. ಹಾಗಾಗಿ ಯಾವುದೇ ಕಾರಣಕ್ಕೂ ಟಿಪ್ಪು ಹೆಸರನ್ನ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದರು.
ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡು ಮೇಕೆದಾಟು ವಿಚಾರದಲ್ಲಿ ಅಡ್ಡಿಪಡಿಸಲು ಯಾವುದೇ ಅಧಿಕಾರ ಇಲ್ಲ. ರಾಜ್ಯ ಸರ್ಕಾರ ಮಾತನಾಡಿ ಕಾಲ ಕಳೆಯುತ್ತಿದ್ದಾರೆ. ಸರ್ಕಾರ ಅಣೆಕಟ್ಟು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧವಾಗಿ ನಾವೇ ಶಂಕುಸ್ಥಾಪನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
Key words: Vatal Nagaraj- protests –demanding- relief -50 thousend crore state