ಬೆಂಗಳೂರು:ಆ-26:(www.justkannada.in) ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲೆಲ್ಲೂ ಸಡಗರದ ತಯಾರಿ ಕೂಡ ನಡೆಯುತ್ತಿದೆ. ಈ ಸಡಗರಕ್ಕೆ ಇನ್ನಷ್ಟು ಮೆರುಗು ನೀಡುವಂತೆ ಈ ಬಾರಿ ವಿಶೇಷವಾಗಿ ಪಿಒಪಿ ಗಣೇಶನ ಮೂರ್ತಿಗಳು ಬಾಡಿಗೆಗೆ ಸಿಗಲಿದೆ ಎಂಬುದು ವಿಶೇಷ.
ಹೌದು. ರಾಜಧಾನಿ ಬೆಂಗಳೂರಿನಲ್ಲಿ ಈ ಹೊಸ ಟ್ರೆಂಡ್ ನ್ನು ಪಿಒಪಿ ಗಣೇಶ ಮೂರ್ತಿ ತಯಾರಿಕರು ಆರಂಭಿಸಿದ್ದಾರೆ. ಈಗಾಗಲೇ ಮುಂಗಡ ಪಾವತಿಸಿ ಬುಕಿಂಗ್ ಮಾಡುವ ಪ್ರಕ್ರಿಯೆ ಶುರುವಾಗಿದೆ. ಮೂರ್ತಿಯ ಗಾತ್ರದ ಆಧಾರದ ಮೇಲೆ ಬಾಡಿಗೆ ದರ ನಿಗದಿಪಡಿಸಲಾಗುತ್ತಿದೆ. ದಿನಕ್ಕೆ ಕನಿಷ್ಠ 500ರೂನಿಂದ 2000 ರೂ ವರೆಗೂ ಇದೆ.
ಗಣೇಶ ಮೂರ್ತಿ ತಯಾರಕರಾದ ಜೆಪಿನಗರದ ರಾಜಪ್ಪ ಅವರು ಹೇಳುವ ಪ್ರಕಾರ, ಈಗ ಇದೊಂದು ಹೊಸ ಪದ್ಧತಿಯಾಗಿದೆ. ನಾವು ಗಣೇಶ ಮೂರ್ತಿ ತಯಾರಿಸಲು ಯಾವುದೇ ಬಣ್ಣ, ಪೇಂಟ್ ಗಳನ್ನು ಬಳಸುವುದಿಲ್ಲ. ಇದು ಸಂಪೂರ್ಣ ಮಣ್ಣಿನಿಂದ ತಯಾರಿಸಲಾಗುತ್ತಿರುವ ಗಣೇಶ ಮೂರ್ತಿಗಳು. ಪಿಒಪಿ ಗಣೇಶ ಮೂರ್ತಿಗಳಿಂದ ಕೆರೆಗಳು ಹಾಳಾಗುತ್ತಿದ್ದು, ಈ ಪ್ರಕಾರದ ಮೂರ್ತಿಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪಿಒಪಿ ಗಣೇಶನ ತಯಾರಕರು ಬಾಡಿಗೆಗೆ ಗಣೇಶ ಮೂರ್ತಿ ನೀಡುವ ಯೋಜನೆ ರೂಪಿಸಿದ್ದಾರೆ. ಇದರಿಂದ ಕೆರೆಗಳ ಮಾಲಿನ್ಯವೂ ಕಡಿಮೆಯಾಗುತ್ತದೆ ಎನ್ನುತ್ತಾರೆ.
ಜನರಿಗೆ ಇಷ್ಟವಾದ ಗಣೇಶನ ಮೂರ್ತಿಗಳನ್ನು ಬೇಕಾದಷ್ಟು ದಿನ ಬಾಡಿಗೆ ಪಡೆದು, ನಂತರ ಆಯಾ ಮೂರ್ತಿಗಳ ಮಾಲಿಕರಿಗೆ ವಾಪಸ್ ನೀಡಬಹುದು. ಕಳೆದ ವರ್ಷದಿಂದ ಬಾಡಿಗೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.
ಮಾರುಕಟ್ಟೆಯಲ್ಲಿ ಪಿಒಪಿ ಮತ್ತು ಫೈಬರ್ನಿಂದ ತಯಾರಿಸುವ ದೊಡ್ಡ ಮೂರ್ತಿಗಳು ಬಾಡಿಗೆಗೆ ಲಭ್ಯವಿದ್ದು, 16 ಅಡಿ ಪಿಒಪಿ ಗಣೇಶ ಮೂರ್ತಿಯ ಮಾರುಕಟ್ಟೆ ಬೆಲೆ 70-80 ಸಾವಿರ ರೂ.ಗಳಾದರೆ, ಇದೇ ಗಾತ್ರದ ಫೈಬರ್ ಗಣೇಶ ಮೂರ್ತಿ 5 ಲಕ್ಷಕ್ಕೆ ಮಾರಾಟ ಮಾಡಲಾಗುತ್ತದೆ. ಇಷ್ಟು ದುಬಾರಿ ಗಣೇಶ ಮೂರ್ತಿಗಳನ್ನು ಖರೀದಿಸುವುದು ಕಷ್ಟವಾಗಿದ್ದು, ಇವುಗಳನ್ನು ಕನಿಷ್ಠ ಮೂರು ದಿನಗಳ ಕಾಲ ತಯಾರಕರಿಂದ ಗ್ರಾಹಕರು ಬಾಡಿಗೆಗೆ ಪಡೆಯುತ್ತಾರೆ.
ಬಾಡಿಗೆ ಪಡೆಯುವವರು ತಯಾರಿಕಾ ಘಟಕಗಳಲ್ಲಿ ಮೂರ್ತಿಯ ಅಸಲು ಮೊತ್ತವನ್ನು ಠೇವಣಿಯಿಟ್ಟು, ಸಂಚಾರ ವೆಚ್ಚವನ್ನು ಗ್ರಾಹಕರೇ ನೀಡಬೇಕು. ದಿನವೊಂದಕ್ಕೆ ಕನಿಷ್ಠ 5 ಸಾವಿರ ಬಾಡಿಗೆ ನೀಡಿದರೆ ಐದು ದಿನಗಳಿಗೆ 25 ಸಾವಿರ ರೂ. ಬಾಡಿಗೆ ಮತ್ತು 5 ಸಾವಿರ ರೂ. ಸಾಗಾಣಿಕ ವೆಚ್ಚ ಸೇರಿ 30 ಸಾವಿರ ಖರ್ಚಾಗಲಿದೆ. ಕೆಲವರು ಮೂರು ದಿನ, ಐದು ದಿನ ಗರಿಷ್ಠ ಏಳು ದಿನಗಳ ಕಾಲ ಈ ಬಾಡಿಗೆ ಮೂರ್ತಿಗಳನ್ನು ಪಡೆಯುತ್ತಾರೆ.
ಈ ಮೂಲಕ ಕಡಿಮೆ ಬಜೆಟ್ನಲ್ಲಿ ಅದ್ದೂರಿ ಗಣೇಶ ಉತ್ಸವ ಮಾಡುವ ಸಾವಿರಾರು ಗಣೇಶ ಉತ್ಸವ ಸಮಿತಿಗಳು ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಪಡೆಯಲು ಬಯಸುತ್ತವೆ ಎಂದು ಗಣೇಶ ಮೂರ್ತಿ ಮಾರಾಟಗಾರ ಶ್ರೀನಿವಾಸ್ ಮಾಹಿತಿ ನೀಡಿದರು. ಸಾಮಾನ್ಯವಾಗಿ ಉತ್ಸವಗಳಿಗೆ ದೊಡ್ಡ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನೇ ಬಳಸುವುದು ವಾಡಿಕೆಯಾಗಿದ್ದು, ಪ್ರತಿ ಉತ್ಸವ ಗಣಪತಿ ಕನಿಷ್ಠ 10 ರಿಂದ 18 ಅಡಿ ಎತ್ತರ ಹೊಂದಿರುತ್ತದೆ.
ಪಿಒಪಿ ಅಥವಾ ಫೈಬರ್ ಗಣೇಶ ಮೂರ್ತಿಯನ್ನು ಬಾಡಿಗೆಗೆ ಪಡೆದರೆ, ಪೂಜೆಗಾಗಿ ಮಣ್ಣಿನ ಗಣೇಶನನ್ನು ಉಚಿತವಾಗಿ ನೀಡಲಾಗುವುದು. ಅಲಂಕಾರ, ಸಂಭ್ರಮ ಮತ್ತು ಉತ್ಸವಗಳಿಗೆ ಪಿಒಪಿ ಅಥವಾ ಫೈಬರ್ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡುವುದರ ಜತೆಗೆ ಪೂಜೆ ಮತ್ತು ನೀರಿನಲ್ಲಿ ವಿಸರ್ಜಿಸಲು ಸಾಮಾನ್ಯ ಗಾತ್ರದ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಕರು ಉಚಿತವಾಗಿ ನೀಡಲಾಗುತ್ತದೆ ಎಂಬುದು ಇನ್ನೊಂದು ವಿಶೇಷ.